ಕರ್ನಾಟಕದಿಂದ ಮತ್ತೆ ನೆರೆ ರಾಜ್ಯಕ್ಕೆ ನೀರು: ರಾಜ್ಯ ಸರ್ಕಾರ ವಿರುದ್ಧ ವಿಜಯೇಂದ್ರ ಕಿಡಿ
ಬೆಂಗಳೂರು, ಮಾರ್ಚ್ 26: ಕುಡಿಯುವ ನೀರಿನ ಉದ್ದೇಶಕ್ಕಾಗಿ ತೆಲಂಗಾಣಕ್ಕೆ 1.5 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ರಾಜ್ಯ ಸರ್ಕಾರ ನಾರಾಯಣಪುರದ ಬಸವಸಾಗರ ಜಲಾಶಯದಿಂದ ರಾತ್ರೋ ರಾತ್ರಿ 10 ಟಿಎಂಸಿ ನೀರು ಹರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಸರ್ಕಾರದ ಮೌಖಿಕ ಆದೇಶದಿಂದಾಗಿ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ನಾಯಕರು ಆರೋಪಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕನ್ನಡಿಗರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ತನ್ನ ಮಿತ್ರ ಪಕ್ಷ ಡಿಎಂಕೆ ಯನ್ನು ಓಲೈಸಲು ತಮಿಳುನಾಡಿಗೆ ನೀರು ಹರಿಯ ಬಿಟ್ಟು ಕಾವೇರಿ ತೀರದ ನಮ್ಮ ರೈತರ ಬದುಕಿಗೆ ಕೊಳ್ಳಿಯಿಟ್ಟಿತ್ತು. ಇದೀಗ ಕೃಷ್ಣಾ ತೀರದ ನಮ್ಮ ರೈತರ ಪರಿಶ್ರಮದ ಬೆವರಿನ ಬೆಳೆಗಳನ್ನು ಒಣಗಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಮಾನವೀಯತೆಯ ಹೆಸರಿನಲ್ಲಿ ತೆಲಂಗಾಣ ರಾಜ್ಯಕ್ಕೆ 1.5 ಟಿಎಂಸಿ ಯಷ್ಟು ನೀರು ಬಿಡಲಾಗಿದೆ ಎಂದು ಹೇಳಿರುವ ಸಚಿವ ಎಂ.ಬಿ ಪಾಟೀಲ್ ಅವರಿಗೂ ತಿಳಿಯದಂತೆ 10 ಟಿಎಂಸಿ ನೀರು ಹರಿಯಬಿಡಲಾಗಿದೆ ಎಂದರೆ ಈ ನೀರು ಬಿಟ್ಟಿರುವ ಹಿಂದಿನ ಆದೇಶದ ಕಾಣದ ಕೈಗಳು ಯಾವುವು? ಕರ್ನಾಟಕ ಸರ್ಕಾರವನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಜಲಸಂಪನ್ಮೂಲ ಇಲಾಖೆ ಸರ್ವಾಧಿಕಾರಿಯ ಮುಷ್ಠಿಯಲ್ಲಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಜಲ ಸಂಪತ್ತು, ಅರಣ್ಯ ಸಂಪತ್ತು ಹಾಗೂ ಪ್ರಾಕೃತಿಕ ಸಂಪತ್ತುಗಳ ಮೇಲೆ ನಿಯಂತ್ರಣ ಸಾಧಿಸಿರುವ ಕಾಂಗ್ರೆಸ್ ವರಿಷ್ಠ ಮಂಡಳಿ ಕರ್ನಾಟಕದ ನದಿಗಳಿಂದ ಹರಿಯುವ ನೀರನ್ನು ತನ್ನ ಮಿತ್ರ ಪಕ್ಷಗಳು ಹಾಗೂ ತನ್ನ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಹರಿಯ ಬಿಡುವಂತೆ ಸೂಚನೆ ನೀಡುತ್ತಿದೆ.
ರಾಜ್ಯದ ಮಣ್ಣಿನ ಮಕ್ಕಳ ಆಕ್ರೋಶ ಅದರಲ್ಲೂ ಉತ್ತರ ಕರ್ನಾಟಕದ ಕೃಷ್ಣ ತೀರದ ರೈತರು ಬೆವರು ಹರಿಸಿ ಬೆಳೆದಿರುವ ಬೆಳೆಗಳು ಈಗಾಗಲೇ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಈ ಕಾರಣಕ್ಕಾಗಿಯೇ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತ ರೈತನ ಆತ್ಮಕ್ಕೆ ಶಾಂತಿ ಕೋರಿ ಆ ಮೃತ ರೈತನ ಕುಟುಂಬದ ಪರವಾಗಿ ಬಿಜೆಪಿ ದನಿಯೆತ್ತಿಲಿದೆ. ಎಂದರು.

ಈ ಕೂಡಲೇ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ಒತಾಯಿಸುತ್ತೇನೆ. ರಾಜ್ಯ ಸರ್ಕಾರ ತೆಲಂಗಾಣಕ್ಕೆ 10 ಟಿಎಂಸಿ ನೀರು ಬಿಟ್ಟಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಈ ಭಾಗದ ರೈತರ ಪರವಾಗಿ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದ್ದಾರೆ.












Click it and Unblock the Notifications