ಸಿಎಂಗೆ ಪ್ರತಿಯಾಗಿ ಬಹಿರಂಗ ಚರ್ಚೆಗೆ ವಿಜಯೇಂದ್ರ ಸವಾಲ್
ನಿನ್ನೆ ಮೋದಿ ಅವರನ್ನು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಪ್ರತಿಯಾಗಿ ಸವಾಲು ಹಾಕಿ ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಘನತೆಯ ಸ್ಥಾನದಲ್ಲಿ ಕುಳಿತಿರುವ ನೀವು ಅಸಂಬದ್ಧವಾಗಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡು ಕಾನೂನಿನ ಕುಣಿಕೆಯ ಆತಂಕ ಎದುರಿಸುತ್ತಿರುವ ಪರಿಸ್ಥಿತಿಯಿಂದ ಹತಾಶೆಯ ಅಂಚಿಗೆ ತಲುಪಿರುವುದು ವೇದ್ಯವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಎತ್ತಿರುವ ಪ್ರಶ್ನೆಗಳಿಗೆ ನೀವು ಬಹಿರಂಗ ಚರ್ಚೆಗೆ ಬರಲು ಸಾಧ್ಯವಿಲ್ಲದಿದ್ದರೆ ಮಾಧ್ಯಮಗಳ ಮೂಲಕವೇ ಉತ್ತರಿಸಿ ನಿಮ್ಮ ಸಾಧನೆಗಳನ್ನು ಬಣ್ಣಿಸಿಕೊಳ್ಳಿ ನೋಡೋಣ, ರಾಜ್ಯದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಆರೋಗ್ಯಕರ ಮನಸ್ಥಿತಿಯಿಂದ ನಾನು ನಿಮಗೆ ಪ್ರಶ್ನೆಗಳನ್ನು ಮುಂದಿಟ್ಟರೆ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸುವ ಬದಲು 'ಏತಿ ಎಂದರೆ ಪ್ರೇತಿ ಎಂದರು'ಎಂಬಂತೆ ಪ್ರತಿಕ್ರಿಯಿಸಿದ್ದೀರಿ ಎಂದು ವಿಜಯೇಂದ್ರ ಹೇಳಿದ್ದಾರೆ.

ನೀವು ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಅವರ ಹೆಸರನ್ನು ಉಲ್ಲೇಖಿಸಿದ್ದೀರಿ, ಆದರೆ ವಿಶ್ವನಾಥ್ ಅವರು ಮೊದಲ ದಿನದಿಂದಲೇ ನೀವು ಪಡೆದ 14 ಅಕ್ರಮ ನಿವೇಶನಗಳ ಕರ್ಮಕಾಂಡವನ್ನು ಬಯಲಿಗೆಳೆದು ಇವತ್ತಿಗೂ ನಿಮ್ಮ ಭ್ರಷ್ಟಾಚಾರದ ಕುರಿತು ಸರಣಿ ರೂಪದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೀವು ಮರೆತಂತಿದೆ. 'ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆದುಕೊಂಡು ಬಂದು ಎಂಥಾ ತಪ್ಪು ಮಾಡಿಬಿಟ್ಟೆವು'ಎಂದು ಇದೇ ವಿಶ್ವನಾಥ್ ರವರು ಈಗಲೂ ಪಶ್ಚಾತಾಪ ಪಡುವ ಅವರ ಹೇಳಿಕೆಯನ್ನು ನೀವು ಮರೆತಂತಿದೆ ಎಂದು ನೆನಪಿಸಿದ್ದಾರೆ.
ರೈತರಿಗೆ ನೀಡಿರುವ ವಕ್ಫ್ ನೋಟೀಸ್ ವಿಚಾರದಲ್ಲೂ ಗೊಂದಲದ ನಿರ್ಧಾರ ಪ್ರಕಟಿಸಿದ್ದೀರಿ. ಆದರೆ ನಿಮ್ಮ ಅಧಿಕಾರಾವಧಿಯಲ್ಲೇ ಮುಗ್ಧ ರೈತರ ಜಮೀನಿನ ದಾಖಲೆಗೆ ವಕ್ಫ್ ಹೆಸರು ಕಾಣಿಸಿಕೊಂಡಿದ್ದಾದರೂ ಏಕೆ? ನೋಟಿಸ್‌ಗಳನ್ನು ಕೊಟ್ಟಿದ್ದಾದರೂ ಏಕೆ? ನೋಟೀಸ್ ಗಳನ್ನು ಈಗ ವಾಪಸ್ ಪಡೆಯುತ್ತಿರುವುದಾಗಿ ಹೇಳುತ್ತಿರುವುದು 'ಮೊಸಳೆ ಕಣ್ಣೀರು' ಎಂಬುದನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಲಾರದಷ್ಟು ಮುಗ್ಧರಲ್ಲ ಎನ್ನುವುದು ನಿಮಗೆ ತಿಳಿದಿರಲಿ ಎಂದು ಗುಡುಗಿದ್ದಾರೆ.
ನೀವು 15 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ದಾಖಲೆಯ ವೀರ ನಿಜ, ಸರ್ಕಾರಿ ನೌಕರರಿಗೂ ಸಂಬಳ ಕೊಡುವುದಕ್ಕೂ ಸಾಲ ಮಾಡುವ ದುಸ್ಥಿತಿಗೆ ಇಳಿಸಿ ವೈಫಲ್ಯರಾಗಿದ್ದೀರಿ ಏಕೆ? ಕೆಲಸ ಮಾಡಿ ಬಿಲ್ ಪಾವತಿಯಾಗದೇ ಕಣ್ಣೀರು ಸುರಿಸುತ್ತಿರುವ ಗುತ್ತಿಗೆದಾರರು ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ತಿಳಿಸುವ ನಿಜವಾದ ಸಾಕ್ಷಿದಾರರಾಗಿದ್ದಾರೆ ಎನ್ನುವುದನ್ನು ಮಹಾನ್ ಆರ್ಥಿಕ ತಜ್ಞರಾದ ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ಕೌಂಟರ್ ನೀಡಿದ್ದಾರೆ.

ಇದ್ದಿದ್ದು ಇದ್ದಂಗೆ ಹೇಳಿದರೆ ಎದ್ ಬಂದು ಎದೆಗೆ ಒದ್ದರಂತೆ"ಎಂಬಂತೆ ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಏನೇನೋ ಬಡಪಡಿಸಿದ್ದೀರಿ, ಪ್ರಧಾನಿ ಮೋದಿ ಅವರ ಕೊಡುಗೆಯ ಕುರಿತು ಪದ ಸಂಸ್ಕೃತಿ ಇಲ್ಲದವರಂತೆ ನೀವು ನೀಡಿದ ಹೇಳಿಕೆಗೆ ಪ್ರತಿಯಾಗಿ ನಾನು ಎತ್ತಿದ್ದು ಈವರೆಗಿನ ನಿಮ್ಮ ಆಡಳಿತದ ವೈಫಲ್ಯಗಳ ಪ್ರಶ್ನೆಗಳನ್ನು, ಈ ಪ್ರಶ್ನೆಗಳನ್ನು ಕೇಳಿದ್ದು ನಾನು ಈ ನಾಡಿನ ರೈತರು,ಮಹಿಳೆಯರು, ಬಡವರು, ಶೋಷಿತರು,ಆದಿವಾಸಿಗಳು,ಹಿಂದುಳಿದವರ ಪರವಾಗಿ, ಇದ್ಯಾವುದಕ್ಕೂ ಉತ್ತರಿಸಲಾಗದ ನೀವು ವಿಷಯಾಂತರ ಮಾಡಿ ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹುವಾಗಿ ತಲೆಕೆಡಿಸಿಕೊಂಡಿರುವ ನಿಮ್ಮ ಬಗ್ಗೆ ಮರುಕವೆನಿಸುತ್ತಿದೆ ಎಂದಿದ್ದಾರೆ.
ಶಿಸ್ತಿನ ಚೌಕಟ್ಟು ಬಿಜೆಪಿಯ ತಾಕತ್ತು-ಬಿಜೆಪಿಯ ಒಗ್ಗಟ್ಟು ಭಾರತದ ಗಮ್ಮತ್ತು. "ಇದು ಕರ್ನಾಟಕಕ್ಕೂ ಹೊರತಲ್ಲ ಎಂಬುದನ್ನು ನಿಮಗೆ ತಿಳಿಸ ಬಯಸುವೆ. ನಾನೊಬ್ಬ ಪ್ರಧಾನ ಸೇವಕ ಎಂದ ಕರೆದುಕೊಂಡ ನರೇಂದ್ರ ಮೋದಿಯವರು ನನಗೆ ಆದರ್ಶ, ಸದ್ಯ ಪಕ್ಷಾಧ್ಯಕ್ಷ ಸ್ಥಾನ ನನಗೆ ವರಿಷ್ಠರು ವಹಿಸಿಕೊಟ್ಟಿರುವ ಮಹತ್ವದ ಜವಾಬ್ದಾರಿಯೇ ಹೊರತು ಅದು ನಿಮ್ಮಂತೆ ಸರ್ವಾಧಿಕಾರ ಪ್ರದರ್ಶಿಸಲು ದೊರಕಿರುವ ಅಧಿಕಾರ ಸ್ಥಾನವಲ್ಲ, ನಾನೇನಿದ್ದರೂ ಒಬ್ಬ ಸಾಮಾನ್ಯ ಕಾರ್ಯಕರ್ತ. ನಿಮ್ಮಂತೆ ವ್ಯಕ್ತಿತ್ವಕ್ಕೆ ಕಳಂಕ ಮೆತ್ತಿಕೊಂಡರೂ ಅಧಿಕಾರಕ್ಕೆ ಅಂಟಿಕೂರುವ ಜಯಮಾನದವನಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.












Click it and Unblock the Notifications