ಕಿತ್ತೂರು ಉತ್ಸವದಲ್ಲಿ ಸಚಿವ ಜಮೀರ್ ಪುತ್ರನ ಸಿನಿಮಾ ಪ್ರಚಾರ: ಬಿಜೆಪಿ ಆರೋಪ
ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕಿತ್ತೂರು ಉತ್ಸವದ ವೇದಿಕೆಯನ್ನ ತಮ್ಮ ವೈಯಕ್ತಿಕ ವಿಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ವೇದಿಕೆಯಲ್ಲಿ ಸಚಿವ ಜಮೀರ್ ಪುತ್ರ ಝೈದ್ ಖಾನ್ ಅವರ ಮುಂಬರುವ ಸಿನಿಮಾದ ಪ್ರಚಾರ ಮಾಡಲಾಗಿದೆ ಎಂದು ವಿಡಿಯೋ ಮೂಲಕ ಖಂಡಿಸಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಈ ಪ್ರಚಾರದ ಅವಶ್ಯಕತೆ ಏನಿತ್ತು? ಎಂದು ಟೀಕಿಸಿದೆ.
ಈ ಬಗ್ಗೆ ಬಿಜೆಪಿ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ಜಮೀರ್ ಅಹ್ಮದ್ ಖಾನ್ ಅವರೇ, ನಿಮ್ಮ ಮಗನನ್ನು ದೊಡ್ಡ ಸ್ಟಾರ್ ಮಾಡುವ ತೆವಲಿದ್ದರೆ, ಪ್ರತಿ ಜಿಲ್ಲೆಯಲ್ಲೂ ನಿಮ್ಮ ಸ್ವಂತ ದುಡ್ಡಲ್ಲಿ ಸಿನಿಮಾ ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡಿ ಎಂದು ವಾಗ್ದಾಳಿ ನಡೆಸಿದೆ. ನಿಮ್ಮ ಶೋಕಿಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ವೇದಿಕೆ ಬಳಸಿಕೊಂಡು ಮಾದಕ ವ್ಯಸನ ಪ್ರೇರೇಪಿಸುವ ದೃಶ್ಯ ಪ್ರದರ್ಶಿಸಿ, ಆ ಮಹಾತಾಯಿ ಚೆನ್ನಮ್ಮನಿಗೆ ಯಾಕೆ ಅವಮಾನಿಸುತ್ತೀರಿ, ಕೂಡಲೇ ಸಮಸ್ತ ಕನ್ನಡಿಗರಲ್ಲಿ ಕ್ಷಮೆ ಕೇಳಿ ಎಂದು ಬಿಜೆಪಿ ಆಗ್ರಹಿಸಿದೆ.

ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮ
ಇದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಬ್ರಿಟೀಷರಿಗೆ ನಮ್ಮವರೇ ಬೆಂಬಲ ಕೊಡುತ್ತಿದ್ದರು. ಚೆನ್ನಮ್ಮ ಮತ್ತು ರಾಯಣ್ಣನವರ ವಿರುದ್ಧ ಪಿತೂರಿ ಮಾಡಿದ್ದರು. ಈಗಲೂ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಎತ್ತಿಕಟ್ಟಿ ಕಚ್ಚಾಡಿಸುವವರು ನಮ್ಮ ನಡುವೆಯೇ ಇದ್ದಾರೆ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು.
ಸ್ವಾಭಿಮಾನಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ ಅವರು ಒಟ್ಟಾಗಿ ಶೌರ್ಯದಿಂದ ಬ್ರಿಟೀಷರನ್ನು ಹಿಮ್ಮೆಟ್ಟಿಸಿದರು. ಬಾಬಾ ಸಾಹೇಬ್ ಪಾಟೀಲರು ಶಾಸಕರಾದ ಬಳಿಕ ಕಿತ್ತೂರು ಉತ್ಸವ ಅತ್ಯಂತ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರು ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಆದರೆ ಇದೇ ಕಾರ್ಯಕ್ರಮವನ್ನು ಜಮೀರ್ ಪುತ್ರನ ಸಿನಿಮಾ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಗ್‌ಬಾಸ್ ಹನುಮಂತಗೂ ಅವಮಾನ?
ಇದೇ ಕಿತ್ತೂರು ಉತ್ಸವದ ವೇದಿಕೆಯಲ್ಲಿ ಬಿಗ್‌ಬಾಸ್ ವಿನ್ನರ್ ಹನುಮಂತ ಅವರಿಗೂ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಹನುಮಂತ ಅವರನ್ನು ಆಹ್ವಾನಿಸಲಾಗಿತ್ತು. ಎರಡನೇ ಬಾರಿ ಹಾಡು ಹಾಡಲು ಅವಕಾಶ ನೀಡಿದ್ದಕ್ಕೆ ಅಲ್ಲಿದ್ದ ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳ ನಡುವೆಯೂ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಜನ ಖಂಡಿಸುತ್ತಿದ್ದಾರೆ.












Click it and Unblock the Notifications