ಸಂವಿಧಾನ ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡುತ್ತೆ: ಡಿಕೆ ಶಿವಕುಮಾರ್‌ಗೆ ಬಿಜೆಪಿ ತಿರುಗೇಟು
ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿಯ ಒಂದೇ ಒಂದು ಸಭೆ ಮಾಡಲು ಬಿಡೋದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಒಂದು ಕಡೆ ದುರಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ದರ್ಪ ತೋರಿ ಕಪಾಳಮೋಕ್ಷಕ್ಕೆ ಯತ್ನಿಸಿದರೆ, ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಭಟನಕಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದೆ.
ಮಿಸ್ಟರ್ ಡಿಕೆ ಶಿವಕುಮಾರ್ ಅವರೇ, ಈಗ ದೇಶದಲ್ಲಿ ಜಾರಿಯಲ್ಲಿರುವುದು ನಕಲಿ ಗಾಂಧಿ ಕುಟುಂಬದ ಸಂವಿಧಾನವಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಜಾರಿಯಲ್ಲಿದೆ. ನಿಮ್ಮ ಸರ್ವಾಧಿಕಾರ ಆಡಳಿತ ಇಲ್ಲಿ ನಡೆಯುವುದಿಲ್ಲ. ನಡೆಸಲು ಯತ್ನಸಿದರೆ ಅಂಬೇಡ್ಕರ್ ಅವರ ಸಂವಿಧಾನ ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡಲಿದೆ ಎಂದು ಟಾಂಗ್ ನೀಡಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಿಸಿದವರನ್ನು ಜೈಲಿಗೆ ಹಾಕಿಸಲು ಬೀದಿಗೆ ಇಳಿಯಲಿಲ್ಲ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗಲೂ ಜೈಲಿಗೆ ಹಾಕಿಸಲು ಬೀದಿಗೆ ಇಳಿಯಲಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಜೈಲಿಗೆ ಹಾಕಿಸಲು ಬೀದಿಗೆ ಇಳಿಯಲಿಲ್ಲ. ಹಿಂದೂಗಳ ಮನೆ ಮೇಲೆ ಕಲ್ಲು ತೂರಿದ ಮತಾಂಧರನ್ನು ಜೈಲಿಗೆ ಹಾಕಿಸಲು ಬೀದಿಗೆ ಇಳಿಯಲಿಲ್ಲ. ಆದರೆ ಈಗ ಕಾಂಗ್ರೆಸ್ ಸರ್ಕಾರದ ಅನಾಚಾರವನ್ನು ಖಂಡಿಸಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ಮಾಡಿದರೆ, ಅವರನ್ನು ಜೈಲಿಗೆ ಹಾಕಿಸಲು ಬೀದಿಗೆ ಇಳಿದಿದ್ದಾರೆ. ಇವರೇ ಅಲ್ಲವೇ ಮಹಿಳೆಯರ ಸಬಲೀಕರಣ ಮಾಡುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ಗೆ ವಿರುದ್ಧ ವಾಗ್ದಾಳಿ ನಡೆಸಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಬಿಜೆಪಿಯವರು ನಮ್ಮ ಪ್ರತಿಭಟನಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಅವರ ಕಾರ್ಯಕರ್ತರನ್ನು ಕಳಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗದ್ದಲ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ನಿಮ್ಮ ಪ್ರವೃತ್ತಿ ಹೀಗೆ ಮುಂದುವರೆದರೆ, ರಾಜ್ಯದಲ್ಲಿ ನೀವು ಒಂದೇ ಒಂದು ಸಭೆ ಮಾಡಲು ನಾವು ಅವಕಾಶ ನೀಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದು ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
ನಾನು ಕೂಡ ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇನೆ. ಪೆಟ್ರೋಲ್, ಡೀಸೆಲ್, ಚಿನ್ನ, ಸಿಮೆಂಟ್ ದರ ಏರಿಕೆ ಯಾಕಾಗಿದೆ ಎಂದು ಬಿಜೆಪಿಯವರನ್ನು ಪ್ರಶ್ನಿಸಲು ಕರೆ ನೀಡಬೇಕಾಗುತ್ತೆ. ನೀವು ನಮ್ಮ ವಿರುದ್ಧ ಹೋರಾಟ ಮಾಡುವುದಕ್ಕಿಂತ, ನಿಮ್ಮ ವಿರುದ್ಧ ಹೋರಾಟ ಮಾಡಲು ನನಗೆ ಹೆಚ್ಚಿನ ಕಾರ್ಯಕ್ಷಮತೆ ಇದೆ. ಬಿಜೆಪಿ ನಾಯಕರು ನಿಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿ ಸರಿ ಮಾಡಿಕೊಳ್ಳಿ. ಇಲ್ಲದಿದ್ರೆ ಎಲ್ಲ ರೀತಿಯ ಹೋರಾಟಕ್ಕೆ ನಾವು ಸಿದ್ಧ. ಇದು ಮನವಿ ಅಲ್ಲ, ಎಚ್ಚರಿಕೆ ಎಂದೇ ಡಿಕೆಶಿ ಎಚ್ಚರಿಸಿದ್ದರು.












Click it and Unblock the Notifications