'ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಅಕ್ಕಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ'
ಬೆಂಗಳೂರು/ಕೋಲಾರ, ಏಪ್ರಿಲ್ 26: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮತ್ತು ಒಂದು ಕಾಲದ ತಮ್ಮ ಪರಮಮಿತ್ರ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗಲೂ ಪರ್ಸಂಟೇಜ್ ವ್ಯವಹಾರ ನಡೆಸುತ್ತಿದ್ದರು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಇಬ್ರಾಹಿಂ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಐಟಿ ಸೆಲ್ ಸರಣಿ ಟ್ವೀಟ್ ಅನ್ನು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ನೀವೇ ಪರ್ಸಂಟೇಜ್ ಪಿತಾಮಹ ಎಂದು ಬಿಜೆಪಿ ಲೇವಡಿ ಮಾಡಿದೆ. ಜೊತೆಗೆ, ಪ್ರಿಯಾಂಕ್ ಖರ್ಗೆಯವರ ವಿಚಾರದ ಬಗ್ಗೆಯೂ ಟ್ವೀಟ್ ಮಾಡಿದೆ.
ಲೋಕಾಯುಕ್ತ, ಅರ್ಕಾವತಿ ಕರ್ಮಕಾಂಡದ ಬಗ್ಗೆಯೂ ಬಿಜೆಪಿ ಟ್ವೀಟ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು ಸಿಐಡಿ ವಿಚಾರಣೆಗೆ ಹಾಜರಾಗುವುದು ಬಿಟ್ಟು, ಪಲಾಯನ ಮಾಡುತ್ತಿರುವುದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಕೋಲಾರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ನಂತರ ಮಾತನಾಡುತ್ತಿದ್ದ ಸಿ.ಎಂ.ಇಬ್ರಾಹಿಂ, "ಕಾಂಗ್ರೆಸ್ ಸರಕಾರ ಅಧಿಕಾದಲ್ಲಿದ್ದಾಗಲೂ ಪರ್ಸಂಟೇಜ್ ವ್ಯವಹಾರ ಸಿದ್ದರಾಮಯ್ಯನವರ ಅಕ್ಕಪಕ್ಕದಲ್ಲೇ ನಡೆಯುತ್ತಿತ್ತು, ಅದಕ್ಕೇ ನಾನು ಕಾಂಗ್ರೆಸ್ ಬಿಡಬೇಕಾಯಿತು"ಎಂದು ಇಬ್ರಾಹಿಂ ಆರೋಪಿಸಿದ್ದರು. ಇದನ್ನು ಮುಂದಿಟ್ಟುಕೊಂಡು, ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಗೋವಿಂದರಾಜ್ ಡೈರಿಯಲ್ಲಿ ನಿಮ್ಮ ಪರ್ಸಂಟೇಜ್ ವ್ಯವಹಾರದ ಲೆಕ್ಕವಿತ್ತೇ?
"ಸಿದ್ದರಾಮಯ್ಯ ಅವರೇ, ಗೋವಿಂದರಾಜ್ ಡೈರಿಯಲ್ಲಿ ನಿಮ್ಮ ಪರ್ಸಂಟೇಜ್ ವ್ಯವಹಾರದ ಲೆಕ್ಕವಿತ್ತೇ? ಅಡಿಯಿಂದ ಮುಡಿಯವರೆಗೂ ಭ್ರಷ್ಟಾಚಾರವನ್ನು ಹೊದ್ದು ಮಲಗಿದ ಸರ್ಕಾರ ನಿಮ್ಮದಾಗಿತ್ತು ಎಂಬುದು ಡೈರಿಯೇ ಹೇಳುತ್ತಿತ್ತು. ತಾನು ಕಳ್ಳ ಪರರ ನಂಬ ಎಂಬ ಮಾತು @siddaramaiah ಅವರಿಗೆ ಹೇಳಿ ಮಾಡಿಸಿದ ಹಾಗಿದೆ"ಎಂದು ಬಿಜೆಪಿ ಐಟಿ ಘಟಕ ಟ್ವೀಟ್ ಮಾಡಿದೆ. ಆದಾಯ ತೆರಿಗೆ ದಾಳಿಯ ವೇಳೆ, ಗೋವಿಂದರಾಜು ಅವರ ಡೈರಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೋಡ್ ರೀತಿಯಲ್ಲಿ ಉಲ್ಲೇಖವಾಗಿತ್ತು. ನನ್ನ ವೈಯಕ್ತಿಕ ಲೆಕ್ಕಾಚಾರಕ್ಕಾಗಿ ಇದನ್ನು ಬರೆದುಕೊಂಡಿದ್ದೆ ಎಂದು ಗೋವಿಂದರಾಜು ಹೇಳಿದ್ದರು.

ಸಿದ್ದರಾಮಯ್ಯ ಅವರ ಅಕ್ಕಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿತ್ತು
ಇನ್ನೊಂದು ಟ್ವೀಟ್ ನಲ್ಲಿ "ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಅಕ್ಕಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿತ್ತು ಎಂದು @siddaramaiah ಆಪ್ತ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಈ ಬಗ್ಗೆ #ಬುರುಡೆರಾಮಯ್ಯ ಅವರ ಸ್ಪಷ್ಟೀಕರಣ ಏನು? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ʼಪರ್ಸೆಂಟೇಜ್ ಪಿತಾಮಹʼ ಎಂದರೆ ತಪ್ಪಾಗಲಾರದು" ಎಂದು ಬಿಜೆಪಿ ಟ್ವೀಟ್ ಮಾಡಿದೆ.
|
ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು
"ಮಾನ್ಯ @siddaramaiah ಅವರೇ, ಅರ್ಕಾವತಿ ಕರ್ಮಕಾಂಡಕ್ಕೆ ಸಂಬಂಧಪಟ್ಟಂತೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದ ತನಿಖೆ ಸರಿಯಾಗಿ ನಡೆದರೆ ನೀವು ಜೈಲು ಪಾಲಾಗುತ್ತಿದ್ದಿರಲ್ಲವೇ? ಆ ಭಯದಿಂದಲೇ, ಜೈಲು ವಾಸ ತಪ್ಪಿಸಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನೇ ಉಸಿರುಗಟ್ಟಿಸಿದಿರಿ". "ಅಧಿಕಾರದಲ್ಲಿದ್ದಾಗಲೇ ಲೋಕಾಯುಕ್ತ ಸಂಸ್ಥೆಯನ್ನು
@siddaramaiah ಅವರು ಅಂಗವಿಕಲಗೊಳಿಸಿದರು. #ಬುರುಡೆರಾಮಯ್ಯ ಅವರೇ, ನಿಮ್ಮ ಸುತ್ತಲೂ ಇರುವ ಪರ್ಸೆಂಟೇಜ್ ಕುಳಗಳನ್ನು ರಕ್ಷಣೆ ಮಾಡಲು ಈ ಕೆಲಸ ಮಾಡಿದ್ದೇ? ಭ್ರಷ್ಟಾಚಾರಕ್ಕೆ ಹಿಂಬಾಗಿಲ ಮೂಲಕ ಪ್ರೋತ್ಸಾಹಿಸಿದ #ಮೀರ್‌ಸಾದಿಕ್ ಇಂದು ಸೊಬಗನಂತೆ ವರ್ತಿಸುತ್ತಿದ್ದಾರೆ"ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಡಿಕೆಶಿಯವರೇ ನಿಮ್ಮ ವಿರುದ್ದವಿರುವ ಪ್ರಕರಣಗಳು ಎಷ್ಟು ಗೊತ್ತೇ?
"ಸಿಆರ್‌ಪಿಸಿ ಪ್ರಕಾರ ತನಿಖಾಧಿಕಾರಿಗಳಿಗೆ ಯಾವುದೇ ಪ್ರಕರಣದ ತನಿಖೆ ನಡೆಸುವಾಗ ದಾಖಲೆ ಹಾಗೂ ಸಾಕ್ಷಿಯ ಮೂಲ ಕೇಳುವ ಅಧಿಕಾರವಿದೆ. ಸಿಐಡಿ ಅಧಿಕಾರಿಗಳು ನಿಯಮದ ಪ್ರಕಾರ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ತಪ್ಪು ಎಂದು ಹೇಳಲು ಕಾಂಗ್ರೆಸ್ಸಿಗರೇನು ಸಂವಿಧಾನ ಹಾಗೂ ಕಾನೂನಿಗೆ ಅತೀತರೇ?". "ತಾಕತ್ತಿದ್ದರೆ ನಮಗೆ ನೋಟಿಸ್ ನೀಡಿ ಎಂದು ಸವಾಲೆಸೆದಿರುವ @DKShivakumar ಅವರೇ, ನಿಮ್ಮ ವಿರುದ್ದವಿರುವ ಪ್ರಕರಣಗಳು ಎಷ್ಟು ಗೊತ್ತೇ? ಎಷ್ಟು ಪ್ರಕರಣದಲ್ಲಿ ಬೇಲ್ ಪಡೆದಿದ್ದೀರಿ, ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೀರಿ ಎಂದು ವಿವರಿಸುವಿರಾ? ನೀವು ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ?"ಎಂದು ಬಿಜೆಪಿ ರಾಜ್ಯ ಐಟಿ ಘಟಕ ಟ್ವೀಟ್ ಮೂಲಕ ಪ್ರಶ್ನಿಸಿದೆ.












Click it and Unblock the Notifications