ಆಪರೇಷನ್ ಕಾಂಗ್ರೆಸ್ ಶುರು? ಸಿದ್ದರಾಮಯ್ಯಗೆ ಉಮೇಶ್ ಕತ್ತಿ ಕರೆ?
Recommended Video
ಬೆಂಗಳೂರು, ಆಗಸ್ಟ್ 22: ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಒಬ್ಬೊಬ್ಬರೇ ಪಕ್ಷ ಬಿಡುವ ಮಾತನಾಡುತ್ತಿದ್ದಾರೆ. ನಿನ್ನೆ ರೇಣುಕಾಚಾರ್ಯ ಅವರು ರಾಜೀನಾಮೆ ನೀಡುತ್ತೇನೆ ಎಂದು ಧಮ್ಕಿ ಹಾಕಿದ್ದರೆ ಹಿರಿಯ ಶಾಸಕ ಉಮೇಶ್ ಕತ್ತಿ ನೇರವಾಗಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ.
ಎಂಟು ಬಾರಿ ಗೆದ್ದಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ಇದರಿಂದ ಸಹಜವಾಗಿಯೇ ಅವರು ಅಸಮಾಧಾನಗೊಂಡಿದ್ದಾರೆ. ಅದರಲ್ಲಿಯೂ ಚುನಾವಣೆ ಸೋತಿರುವ ಲಕ್ಷ್ಮಣ ಸವಧಿಗೆ ಸಚಿವ ಸ್ಥಾನ ನೀಡಿರುವುದು ಅವರ ಅಸಮಾಧಾನ ಇನ್ನಷ್ಟು ಹೆಚ್ಚಿಸಿದೆ.
ನಿನ್ನೆ ರಾತ್ರಿ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಕಡೆ ವಾಲುವ ಉಮೇದು ತೋರಿದ್ದಾರೆ. ರಾತ್ರಿ ಕರೆ ಮಾಡಿದ್ದ ಉಮೇಶ್ ಕತ್ತಿ, ಮುಖ್ಯವಾದ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಇಂದು ಕತ್ತಿ ಅವರಿಗೆ ತಮ್ಮನ್ನು ಭೇಟಿ ಆಗುವಂತೆ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸಿದ್ದು-ಕತ್ತಿ ಭೇಟಿ?
ಸಿದ್ದರಾಮಯ್ಯ ಅವರ ಸೂಚನೆಯಂತೆ ಉಮೇಶ್ ಕತ್ತಿ ಅವರು ಇಂದು ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಆಗುವ ಸಾಧ್ಯತೆ ಇದೆ. ಭೇಟಿಯಾಗಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೊಸ ಪಕ್ಷ ಸ್ಥಾಪನೆಯ ಉಮೇದು ಸಹ ಉಮೇಶ್ ಕತ್ತಿಗೆ ಇದೆ ಎನ್ನಲಾಗುತ್ತಿದೆ.

ದೆಹಲಿ ಪ್ರವಾಸ ರದ್ದು ಮಾಡಿದ ಸಿದ್ದರಾಮಯ್ಯ
ಉಮೇಶ್ ಕತ್ತಿ ಭೇಟಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ದೆಹಲಿ ಪ್ರವಾಸವನ್ನು ರದ್ದು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ತೆರಳಿ ರಾಜೀವ್ ಗಾಂಧಿ ಅವರ ಸ್ಮರಣಾರ್ಥ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಇದೇ ಕಾರಣಕ್ಕೆ ಅವರು ದೆಹಲಿ ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ಉಮೇಶ್ ಕತ್ತಿ-ಯಡಿಯೂರಪ್ಪ ಭೇಟಿ
ನಿನ್ನೆ ಸಂಜೆ ಉಮೇಶ್ ಕತ್ತಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದರು, ಆದರೆ ಈ ಮಾತುಕತೆ ಫಲ ನೀಡಿಲ್ಲ ಹಾಗಾಗಿ ಕತ್ತಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅಷ್ಟೆ ಅಲ್ಲದೆ, ತಮ್ಮೊಂದಿಗೆ ಆರು ಮಂದಿ ಶಾಸಕರಿರುವುದಾಗಿಯೂ ಕತ್ತಿ ಹೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೇ ಕತ್ತಿಯನ್ನು ಸಿದ್ದರಾಮಯ್ಯ ಆಹ್ವಾನಿಸಿದ್ದರು
ಉಮೇಶ್ ಕತ್ತಿ ಅವರು ಹಿಂದೆ ಜನತಾ ಪರಿವಾರದಲ್ಲಿದ್ದವರು. ಅಲ್ಲಿಂದಲೇ ಮೊದಲ ಬಾರಿಗೆ ಶಾಸಕರಾಗಿದ್ದವರು. ಆಗಿನಿಂದಲೂ ಸಿದ್ದರಾಮಯ್ಯ ಅವರಿಗೆ ಉಮೇಶ್ ಕತ್ತಿ ಆಪ್ತರು. ಈ ಹಿಂದೆ ಸಿದ್ದರಾಮಯ್ಯ ಅವರೇ ಕತ್ತಿ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದರು. ಆದರೆ ಆಗ ಕತ್ತಿ ಅವರು ಪಕ್ಷಾಂತರ ಮಾಡಿರಲಿಲ್ಲ. ಆದರೆ ಈಗ ಪಕ್ಷಾಂತರ ಮಾಡುವ ಮುನ್ಸೂಚನೆ ನೀಡಿದ್ದಾರೆ.

ಬಿಜೆಪಿಯ ಅತೃಪ್ತರೆಲ್ಲಾ ಒಂದು
ಉಮೇಶ್ ಕತ್ತಿ, ರೇಣುಕಾಚಾರ್ಯ, ತಿಪ್ಪಾರೆಡ್ಡಿ ಇನ್ನೂ ಕೆಲವು ಅತೃಪ್ತ ಶಾಸಕರು ಈಗಾಗಲೇ ಒಟ್ಟಾಗಿದ್ದು, ಬಿಜೆಪಿಗೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೆ ಅಲ್ಲದೆ ರಾಜೀನಾಮೆ ನೀಡುವ ಧಮ್ಕಿಯನ್ನೂ ಹಾಕಿದ್ದಾರೆ.












Click it and Unblock the Notifications