2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು; ಮತ್ತೆ ದೇಶವನ್ನ ಮುನ್ನಡೆಸಲಿರುವ ಮೋದಿ: ಶೋಭಾ ಕರಂದ್ಲಾಜೆ
ಬೆಂಗಳೂರು, ಆಗಸ್ಟ್ 26: ಕಳೆದ ಎರಡು ಲೋಕಸಭಾ ಚುಣಾವಣೆಯಲ್ಲಿಯೂ ಎನ್ ಡಿಎ ಅಧಿಕಾರಕ್ಕೆ ಬಂದಿದ್ದು, 2024ರ ಲೋಕಸಭೆ ಚುನಾವಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ದೇಶವನ್ನು ಮತ್ತೆ ಮುನ್ನಡೆಸುತ್ತಾರೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
2024ರ ಲೋಕಸಭೆಗೆ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10 ರವರೆಗೆ 'ಮತದಾರರ ಚೇತನ ಮಹಾಭಿಯಾನ' (ಮತದಾರರ ಜಾಗೃತಿ ಅಭಿಯಾನ) ಪ್ರಾರಂಭಿಸಲಿದೆ ಎಂದು ಹೇಳಿದರು.

ಸೆಪ್ಟೆಂಬರ್ 17 ರಂದು, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತದಾರರಿಗೆ ಮನವಿ ಮಾಡಲು ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು. ರಾಜ್ಯಾದ್ಯಂತ 58,000 ಬೂತ್‌ಗಳಲ್ಲಿ ಹೊಸ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯನ್ನೂ ಪಕ್ಷವು ಕೈಗೆತ್ತಿಕೊಳ್ಳಲಿದೆ ಎಂದರು.
ಎಲ್ಲಾ ಸಂಸದರು, ಶಾಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳು ಪ್ರಚಾರದಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿದ್ದಾರೆ. ಮತದಾರರ ಪಟ್ಟಿಯ ತಿದ್ದುಪಡಿ ಮತ್ತು ನೋಂದಣಿಗೆ ವ್ಯಾಪಕವಾದ ಯೋಜನೆ ರೂಪಿಸಬೇಕು ಮತ್ತು ಯೋಜನೆಯ ಪರಿಶೀಲನೆಯನ್ನು ಕಾಲಕಾಲಕ್ಕೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಾಡಲಿದ್ದೇವೆ ಎಂದು ಹೇಳಿದರು.
ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ತಂಡ ರಚಿಸಿದ್ದು, ಸಂಸದ ತೇಜಸ್ವಿ ಸೂರ್ಯ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ.ರಾಜೀವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಮುಖಂಡ ಲೋಕೇಶ್ ಬಿಜ್ಜಾವರ ಅವರು ತಂಡದಲ್ಲಿದ್ದಾರೆ ಎಂದು ತಿಳಿಸಿದರು.
ಪ್ರತೀ ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ 3 ಸದಸ್ಯರ ಜಿಲ್ಲಾ ಸಮಿತಿ ಮತ್ತು ವಿಧಾನಸಭೆ ಕ್ಷೇತ್ರಕ್ಕೆ 3 ಜನರ ಸಮಿತಿ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ವಿಧಾನಸಭಾ ಮಟ್ಟದಲ್ಲಿ ಬಿಎಲ್‍ಎ-1 ಮತ್ತು ಬೂತ್ ಮಟ್ಟದಲ್ಲಿ ಬಿಎಲ್‍ಎ-2 ನೇಮಕ ಮಾಡುತ್ತಿದ್ದೇವೆ ಎಂದರು. ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಾಗಾರ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲಿ ಬಿಎಲ್‍ಎ-2 ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ಬಿಎಲ್‍ಒ ಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಅಗತ್ಯಕ್ಕೆ ಅನುಗುಣವಾಗಿ ತಮ್ಮ ದೂರುಗಳನ್ನು ನೋಂದಾಯಿಸಬೇಕು ಎಂದು ಅವರು ತಿಳಿಸಿದರು. ಶಕ್ತಿ ಕೇಂದ್ರ ಮಟ್ಟದಲ್ಲಿ ತಾಂತ್ರಿಕ ಹಿನ್ನೆಲೆ ಹೊಂದಿರುವ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ.
ಇದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನಗಳನ್ನು ಆಯೋಜಿಸಲಿದ್ದು, ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಿದ್ದೇವೆ. ಹೊಸ ವಸತಿ ಪ್ರದೇಶಗಳು, ಬಹುಮಹಡಿ ಕಟ್ಟಡಗಳು, ಹಾಸ್ಟೆಲ್‍ಗಳಲ್ಲಿ, ಕಾರ್ಮಿಕ ವಸತಿ ಪ್ರದೇಶಗಳಲ್ಲಿ ವಿಶೇಷ ಅಭಿಯಾನಗಳನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ನಕಲಿ ಮತದಾರರನ್ನು ತೆಗೆಸುವುದು ಮತ್ತು ವರ್ಗಾವಣೆ ಪ್ರಕ್ರಿಯೆಗೆ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸಾವಿರ, ಅದಕ್ಕಿಂತ ಚಿಕ್ಕ ಕ್ಷೇತ್ರಗಳಲ್ಲಿ 10 ಸಾವಿರ ಮತ್ತು ಸಣ್ಣ ಕ್ಷೇತ್ರಗಳಲ್ಲಿ 5 ಸಾವಿರ ಮತದಾರ ಗುರಿಯನ್ನು ನಿಗದಿಪಡಿಸಲಾಗಿದೆ. ಸಂಪೂರ್ಣ ಪ್ರಚಾರದ ಅಭಿಯಾನವನ್ನು ಚುನಾವಣಾ ಆಯೋಗವು ನಿಗದಿ ಪಡಿಸಿದ ದಿನಾಂಕಗಳಿಗೆ ಅನ್ವಯವಾಗುವಂತೆ ಯೋಜಿಸಲಾಗುತ್ತದೆ ಎಂದರು.












Click it and Unblock the Notifications