ಮಂಗಳೂರು ಚಲೋ, 5 ನಗರದಿಂದ ಹೊರಡಲಿದೆ ಬಿಜೆಪಿ ರಥಯಾತ್ರೆ
ಬೆಂಗಳೂರು, ಆಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ರಾಜೀನಾಮೆಗೆ ಆಗ್ರಹಿಸಿ ಐದು ನಗರಗಳಲ್ಲಿ ರಥಯಾತ್ರೆ ನಡೆಸಲು ಕರ್ನಾಟಕ ಬಿಜೆಪಿ ಯೋಜನೆ ಹಾಕಿಕೊಂಡಿದೆ. ಈ ಹಿಂದೆ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾಣಿ ಅಯೋಧ್ಯೆಗೆ ರಥಯಾತ್ರೆ ಕೈಗೊಂಡಿದ್ದ ಮಾದರಿಯಲ್ಲೇ ರಾಜ್ಯದಲ್ಲೂ ನಡೆಸಲು ಪಕ್ಷ ತೀರ್ಮಾನಿಸಿದೆ.
ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಥಯಾತ್ರೆ ಮಾಡಿ, ಸಚಿವ ರೈ ರಾಜೀನಾಮೆಗೆ ಆಗ್ರಹಿಸುವುದು ಬಿಜೆಪಿ ಉದ್ದೇಶವಾಗಿದೆ. ಇಪ್ಪತ್ತೇಳುವ ವರ್ಷಗಳ ಹಿಂದೆ ಸೆಪ್ಟೆಂಬರ್ ನಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ರಥ ಯಾತ್ರೆ ನಡೆಸಿದ್ದರು. ಅದು ಆಯೋಧ್ಯೆವರೆಗೆ ತೆರಳಿತ್ತು. ಆ ನಂತರ ಇಡೀ ದೇಶದಲ್ಲಿ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಯುವ ಮೋರ್ಚಾವು ರಥ ಯಾತ್ರೆಯ ನೇತೃತ್ವವನ್ನು ವಹಿಸುತ್ತದೆ. ಐದು ನಗರಗಳಲ್ಲಿ, ಐದು ರಥಗಳ ಜತೆಗೆ ಹೊರಡುವ ಹತ್ತು ಸಾವಿರ ಬೈಕ್ ಸವಾರರು ಮಂಗಳೂರಿನಲ್ಲಿ ಯಾತ್ರೆ ಪೂರ್ಣಗೊಳಿಸುತ್ತಾರೆ. ಈ ಅಭಿಯಾನಕ್ಕಾಗಿ ಪೊಲೀಸರ ಅನುಮತಿ ಪಡೆಯಬೇಕಿದೆ.
ಶರತ್ ಮಡಿವಾಳ ಸೇರಿದಂತೆ ಹತ್ಯೆಯಾದ ಆರೆಸ್ಸೆಸ್ ಹಾಗೂ ಬಿಜೆಪಿಯ ಹನ್ನೊಂದು ಕಾರ್ಯಕರ್ತರ ಭಾವಚಿತ್ರವನ್ನು ರಥವು ಒಳಗೊಂಡಿರುತ್ತದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಶಿವಮೊಗ್ಗದಿಂದ ಈ ರಥಗಳು ಹೊರಡುತ್ತವೆ ಎಂದು ವರದಿಯಾಗಿದೆ.
ರಥವು ಸಾಗುವ ಮಾರ್ಗ ಮಧ್ಯೆ ಸಭೆಗಳನ್ನು ನಡೆಸಿ, ಕಾರ್ಯಕರ್ತರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ ಏಳರಂದು ಈ ರಥಗಳು ಮಂಗಳೂರು ತಲುಪಿ, ಅಲ್ಲಿ ಬೃಹತ್ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ಮೈಸೂರಿನಿಂದ ಹೊರಡುವ ರಥದ ನೇತೃತ್ವವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಹಿಸಲಿದ್ದಾರೆ. ಉಳಿದೆಲ್ಲ ಕಡೆ ಕಾರ್ಯಕರ್ತರು ಮಾತ್ರ ಭಾಗವಹಿಸಲಿದ್ದಾರೆ. ರಥದ ಜತೆಗೆ ಆಂಬುಲೆನ್ಸ್, ಮೆಕ್ಯಾನಿಕ್ ಗಳ ವ್ಯವಸ್ಥೆ ಸಹ ಇರಲಿವೆ.












Click it and Unblock the Notifications