BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ‍್ಯಾರು ಬರಲಿದ್ದಾರೆ?
ಬೆಂಗಳೂರು, ಏಪ್ರಿಲ್. 19: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಮತದಾನಕ್ಕೆ ಐದು ದಿನ ಇರುವಾಗ ರಾಜಕೀಯ ಪಕ್ಷಗಳ ಭಾರೀ ಕಸರತ್ತು ನಡೆಸುತ್ತಿವೆ. ಹೇಗಾದರೂ ಮಾಡಿ ತನ್ನ ಎಲ್ಲಾ ಸ್ಥಾನಗಳನ್ನು ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಪ್ರಯತ್ನ ಪಡುತ್ತಿದೆ.
ಇದೇ ಕಾರಣಕ್ಕೆ ಏಪ್ರಿಲ್ 20ರ ಶನಿವಾರದಿಂದ ಬಿಜೆಪಿ ತನ್ನ ರಾಷ್ಟ್ರೀಯ ನಾಯಕರಿಂದ ರಾಜ್ಯಾದ್ಯಂತ ಭರ್ಜರಿ ಪ್ರಚಾರ ಮಾಡಿಸಲು ಮುಂದಾಗಿದೆ. ಪ್ರತಿದಿನ, ಒಬ್ಬ ಪ್ರಮುಖ ನಾಯಕರು ಅಥವಾ ಇನ್ನೊಬ್ಬರು ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ರ್‍ಯಾಲಿಗಳು ಮತ್ತು ರೋಡ್‌ಶೋಗಳಲ್ಲಿ ಭಾಗವಹಿಸಲಿದ್ದಾರೆ.

ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಮತ್ತು ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕಾರ್ಯಕ್ರಮಗಳ ನಂತರ ಅವರು ಬೆಂಗಳೂರಿನ ಅರಮನೆ ಮೈದಾನಕ್ಕೆ ತೆರಳಿ ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಮತ್ತು ಗ್ರಾಮಾಂತರ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಂದೇ ದಿನ ಆರು ಕ್ಷೇತ್ರಗಳ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ.
ಏಪ್ರಿಲ್ 21 ರಿಂದ ಜೆಪಿ ನಡ್ಡಾ, ಏಪ್ರಿಲ್ 23 ರಿಂದ ಅಮಿತ್ ಶಾ ಕರ್ನಾಟಕ ಪ್ರವಾಸ
ಏಪ್ರಿಲ್ 21 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎರಡು ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ, ಅವರ ಕಾರ್ಯಕ್ರಮ ವೇಳಾಪಟ್ಟಿ ಸಿದ್ಧವಾಗುತ್ತಿದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ ಏಪ್ರಿಲ್ 23 ರಂದು ಇಡೀ ದಿನ ಬೆಂಗಳೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಯಶವಂತಪುರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 12.30ಕ್ಕೆ ಯಲಹಂಕದಲ್ಲಿ ಸಾರ್ವಜನಿಕ ಸಮಾವೇಶ, ಸಂಜೆ 4 ಗಂಟೆಗೆ ಬೊಮ್ಮನಹಳ್ಳಿ ಮತ್ತು 7 ಗಂಟೆಗೆ ಮಹದೇವಪುರದಲ್ಲಿ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದರು.

ಏಪ್ರಿಲ್ 24 ರಂದು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ಬಳಿಕ ತುಮಕೂರಿಗೆ ತೆರಳಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಿ, ಸಂಜೆ ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಏಪ್ರಿಲ್ 24 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಇರಲಿದ್ದಾರೆ. ಅದೇ ದಿನ ಅವರು ಉಡುಪಿಯ ಮಲ್ಪೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಏಪ್ರಿಲ್ 24 ರಂದು ಕರ್ನಾಟಕಕ್ಕೆ ಬರಲಿದ್ದು, ಸ್ಥಳಗಳು ಇನ್ನೂ ನಿರ್ಧಾರವಾಗಿಲ್ಲ.
ಮೋದಿ ಪ್ರಚಾರದಲ್ಲಿ 15 ಲಕ್ಷ ಮಂದಿ!
ಬಿಜೆಪಿ ಏಪ್ರಿಲ್ 21 ಮತ್ತು 28 ರಂದು ''ನಾನೂ ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ'' ಅಭಿಯಾನವನ್ನು ಆಯೋಜಿಸಿದೆ. ಈ ಅಭಿಯಾನದಲ್ಲಿ ಬರೀ ಸಾಮಾನ್ಯ ಜನರನ್ನು ಒಳಗೊಳ್ಳಾಗುತ್ತದೆ. ನಾಯಕರಲ್ಲ. ಅಭ್ಯರ್ಥಿಗಳ ಪರ ಜನಸಾಮಾನ್ಯರೇ ಪ್ರಚಾರ ನಡೆಸಲಿದ್ದಾರೆ. ರಾಜ್ಯದಾದ್ಯಂತ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಪಿ ನಾಯಕರು ಪ್ರತಿ ಬೂತ್‌ಗೆ 50 ಜನರನ್ನು ನಿಯೋಜಿಸಿದೆ.












Click it and Unblock the Notifications