ಬಿಜೆಪಿ ವಿರೋಧ ಪಕ್ಷದ ನಾಯಕ -ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬ: ಹೈಕಮಾಂಡ್ ಲೆಕ್ಕಾಚಾರವೇನು? ರೇಸ್‌ನಲ್ಲಿ ಯಾರ ಹೆಸರುಗಳಿವೆ?
ಬೆಂಗಳೂರು, ಮೇ 23: ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತಿನ ಬಳಿಕ ಇದೀಗ ವಿಪಕ್ಷ ಬಿಜೆಪಿಯಲ್ಲಿ ಅಂತದ್ದೆ ಶುರುವಾಗಿದೆ. ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿದರೂ ಸಹ ಇನ್ನೂವರೆಗೆ ಬಿಜೆಪಿಯಲ್ಲಿ ವಿಪಕ್ಷ ಸ್ಥಾನ ಯಾರಿಗೆ, ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಎಂಬುದು ಅಂತಿಮವಾಗಿಲ್ಲ. ಹಾಗಾದರೆ ಈ ರೇಸಿನಲ್ಲಿ ಯಾರೆಲ್ಲ ಇದ್ದಾರೆ ಎಂದು ಇಲ್ಲಿ ತಿಳಿಯೋಣ.
ಚುನಾವಣಾ ಫಲಿತಾಂಶ ಬಂದ ವಾರವೇ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ಶಾಸಕರ ಜೊತೆ ಅನೌಪಚಾರಿಕ ಸಭೆ ನಡೆಸಿದ್ದರು. ವಿಪಕ್ಷ ನಾಯಕನ ಸ್ಥಾನಕ್ಕೆ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ ಇದುವರೆಗೂ ಯಾರು ವಿರೋಧ ಪಕ್ಷದ ನಾಯಕ ಸ್ಥಾನ ಅಲಂಕರಿಸಬೇಕು ಎಂಬುದು ಮಾತ್ರ ನಿರ್ಧರಿಸಿಲ್ಲ. ಅಲ್ಲದೇ ಈ ಸ್ಥಾನಕ್ಕೆ ಹಿರಿಯ ನಾಯಕರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಸಿಎಂ ಸ್ಥಾನದ ಆಯ್ಕೆ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆ ಕುತೂಹಲ ಕೆರಳಿಸಿದೆ.

ಇದು ಕೇವಲ ಶಾಸಕ, ಮಂತ್ರಿಗಿತಿಯಂತಹ ಸ್ಥಾನವಲ್ಲ. ಬದಲಾಗಿ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷವಾಗಿ, ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಬಲ್ಲ ಪ್ರಬಲ ಹುದ್ದೆಯು ಆಗಿದೆ. ಕಳೆದ ಬಾರಿ ತಾವು ಜಾರಿಗೆ ತಂದ ಕಾರ್ಯಕ್ರ, ಯೋಜನೆ, ಕಾಯ್ದೆಗಳನ್ನು ಪ್ರಸ್ತುತ ಸರ್ಕಾರ ನಿಷೇಧಿಸಲು, ತೆಗೆದು ಹಾಕಲು ಮುಂದಾದರೆ ಆಗ ಸಮರ್ಥವಾಗಿ ಪ್ರಶ್ನಿಸುವ, ಸರ್ಕಾರದ ಅವಧಿಯಲ್ಲಿನ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಹೊಂದಿರಬೇಕು.
ಅನುಭವದ ಜೊತೆಗೆ ವಾಗ್ಮಿಯೂ ಆಗಿರುವವರಿಗೆ ಈ ಸ್ಥಾನ ನೀಡಬೇಕೆಂಬುದು ಬಿಜೆಪಿ ವರಿಷ್ಠರ ಚಿಂತನೆ ಆಗಿದೆ. ಹೀಗಾಗಿಯೇ ಅಳೆದು ತೂಗಿ ನಾಯಕರನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಈ ವಿಪಕ್ಷ ಸ್ಥಾನ ಆಯ್ಕೆಯ ರೇಸಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಆರ್ ಅಶೋಕ್, ಮಾಜಿ ಸಚಿವ ಸುನೀಲ್ ಕುಮಾರ್ ಅವರು ಹೆಸರು ಸಹ ಕೇಳಿ ಬಂದಿತ್ತು. ಹಲವರು ಬಸವರಾಜ ಬೊಮ್ಮಾಯಿಯವರೇ ಈ ಸ್ಥಾನಕ್ಕೆ ಸೂಕ್ತ ಎಂದು ಹೇಳಿದ್ದಾರೆ. ಇತ್ತ ಯತ್ನಾಳ್ ಮತ್ತು ಬೊಮ್ಮಾಯಿಯವರ ಹೆಸರು ಪಟ್ಟಿಯಲ್ಲಿ ಮುಂದಿದೆ.

ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ದಾಳಿಗೆ ಪ್ರತಿದಾಳಿ ಒಡ್ಡಲು ಕಾಂಗ್ರೆಸ್‌ನಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಅದೇ ರೀತಿ ಬಿಜೆಪಿಯಲ್ಲೂ ಪ್ರಬಲ ನಾಯಕರನ್ನೇ ಆಯ್ಕೆ ಮಾಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಇದರಿಂದಲೇ ವಿಪಕ್ಷ ನಾಯಕರ ಆಯ್ಕೆ ವಿಳಂಬ ವಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ರೇಸಿನಲ್ಲಿ ಯಾರಿದ್ದಾರೆ?
ಕೇವಲ ವಿಪಕ್ಷ ನಾಯಕ ಆಯ್ಕೆಯಲ್ಲಿ ಮಾತ್ರವೇ ವಿಳಂಬವಾಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ಹೊತ್ತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಪರ್ಯಾಯ ನಾಯಕ ಆಯ್ಕೆ ವಿಚಾರದಲ್ಲೂ ಯಾವ ನೀರ್ಣಯವನ್ನು ಬಿಜೆಪಿ ಅಂತಿಮಗೊಳಿಸಿಲ್ಲ.
ಇನ್ನು ಈ ರಾಜ್ಯಾಧ್ಯಕ್ಷ ಸ್ಥಾನ ರೇಸಿನಲ್ಲಿ ಹಿಂದುತ್ವ ಮುಖಗಳಾದ ಲಿಂಗಾಯತ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿ.ಸೋಮಣ್ಣ, ಒಕ್ಕಲಿಗರಾದ ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ, ಈಡಿಗ ಸಮುದಾಯದ ವಿ.ಸುನೀಲ್ ಕುಮಾರ್ ಇದ್ದಾರೆ. ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆಗಳನ್ನು ಕಾಂಗ್ರೆಸ್ ವಾಪಾಸ್ ಪಡೆಯುವ ಸನ್ನಾಹದಲ್ಲಿದೆ. ಈ ಬಗ್ಗೆ ಕಟುವಾಗಿ ಎದುರಿಸುವ ಸಾಮರ್ಥ್ಯ ಹಿಂದುವಾದಿಗಳಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸುನೀಲ್ ಕುಮಾರ್‌ಗೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬಂದಿದ್ದವು. ಆದರೆ ಯಾರೊಬ್ಬರು ಇನ್ನು ಆಯ್ಕೆಯಾಗಿಲ್ಲ ಎನ್ನಲಾಗಿದೆ.











Click it and Unblock the Notifications