ಉನ್ನತ ಶಿಕ್ಷಣ ಇಲಾಖೆಗೆ ಪ್ರೊ.ಕೆ.ಎಸ್.ರಂಗಪ್ಪ ನೇಮಕಕ್ಕೆ ಬಿಜೆಪಿ ವಿರೋಧ
ಬೆಂಗಳೂರು, ಜೂನ್ 24 : ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರನ್ನಾಗಿ ನೇಮಿಸಬಾರದು ಎಂದು ಬಿಜೆಪಿ ನಿಯೋಗ ಮನವಿ ಮಾಡಿದೆ. 'ಇಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ' ಎಂದು ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಾಯಕರ ನಿಯೋಗ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿದೆ. ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಅರುಣ್ ಶಹಾಪುರ ಮನವಿ ಮಾಡಿದ್ದಾರೆ.
'ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಸಲಹೆಗಾರರನ್ನಾಗಿ ನೇಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅವರ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ತಪ್ಪು ಮಾಡಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಆಗುತ್ತದೆ' ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಬಿಜೆಪಿ ಆರೋಪವೇನು? : ಕರ್ನಾಟಕ ಮಕ್ತ ವಿಶ್ವವಿದ್ಯಾಲಯ 2013-14ನೇ ಸಾಲಿನಿಂದಲೇ ಮಾನ್ಯತೆ ಕಳೆದುಕೊಂಡಿದೆ. ಇದುವರೆಗೂ ವಿವಿಗೆ ಮಾನ್ಯತೆ ಸಿಕ್ಕಿಲ್ಲ. ಅಂದಿನಿಂದ ಶೈಕ್ಷಣಿಕ ಚಟುವಟಿಕೆ ನಡೆಯದೇ ವಿಶ್ವವಿದ್ಯಾಲಯ ಕೋಮಾ ಸ್ಥಿತಿ ತಲುಪಿದೆ ಎಂದು ಬಿಜೆಪಿ ನಿಯೋಗ ದೂರಿದೆ.
2009ರಲ್ಲಿ ರಂಗಪ್ಪ ಕುಲಪತಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ನಂತರ ಬಂದ ಪ್ರೊ.ಎಂ.ಜೆ.ಕೃಷ್ಣನ್ ಅವರೂ ಸಹ ರಂಗಪ್ಪ ಮಾತಿನಂತೆ ನಡೆದುಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ವಿವಿಯ ಇಂದಿನ ಸ್ಥಿತಿಗೆ ಅವರಿಬ್ಬರು ಕಾರಣ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications