ಪರಿಷತ್ ನಾಮನಿರ್ದೇಶಿತರ ಪಟ್ಟಿಗೆ ಬಿಜೆಪಿ ವಿರೋಧ
ಬೆಂಗಳೂರು, ಜೂ. 22 : ವಿಧಾನಪರಿಷತ್ ನಾಮನಿರ್ದೇಶನ ಪಟ್ಟಿಗೆ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ರಾಜಕೀಯ ಹಿನ್ನಲೆವುಳ್ಳ ವ್ಯಕ್ತಿಗಳನ್ನು ನಾಮ ನಿರ್ದೇಶಿತರ ಪಟ್ಟಿಯಲ್ಲಿ ಸೇರಿಸಿದೆ. ಆದ್ದರಿಂದ, ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಬಾರದು ಎಂದು ಕರ್ನಾಟಕ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಭಾನುವಾರ ಪ್ರತಿಪಕ್ಷ ನಾಯಕರ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದ ನಿಯೋಗ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಸಲ್ಲಿಸಿರುವ ವಿಧಾನಪರಿಷತ್ ನಾಮ ನಿರ್ದೇಶಿತ ಪಟ್ಟಿಯ ಬಗ್ಗೆ ದೂರು ಸಲ್ಲಿಸಿದೆ.

ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಮತ್ತು ರಾಜಕೀಯವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮನಿರ್ದೇಶನ ಮಾಡಿದ್ದಾರೆ. ಆದ್ದರಿಂದ ಪಟ್ಟಿಗೆ ಅಂಕಿತ ಹಾಕಬಾರದು ಎಂದು ಬಿಜೆಪಿ ನಾಯಕರು ಮನವಿ ಮಾಡಿದರು. [ಪರಿಷತ್ ನಾಮನಿರ್ದೇಶಿತರ ಪಟ್ಟಿ ಅಂತಿಮ]
ಸರ್ಕಾರ ವಿಧಾನ ಪರಿಷತ್ ನಾಮನಿರ್ದೇಶನವನ್ನು ರಾಜಕೀಯ ಪುನರ್ವಸತಿಗಾಗಿ ಬಳಸಿಕೊಳ್ಳುತ್ತಿದೆ. ಸದಸ್ಯರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ಸಿಎಂ ಸಿದ್ದರಾಮಯ್ಯ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಸರ್ಕಾರ ಕಳುಹಿಸಿರುವ ಪಟ್ಟಿಗೆ ಒಪ್ಪಿಗೆ ನೀಡಬಾರದು. ನಾಮನಿರ್ದೇಶವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ನಾಯಕರು ಮನವಿಯಲ್ಲಿ ತಿಳಿಸಿದ್ದಾರೆ.
ಚಿತ್ರ ನಟಿ ಜಯಮಾಲಾ ಅವರನ್ನು ಹೊರತು ಪಡಿಸಿದರೆ ಸರ್ಕಾರ ನಾಮ ನಿರ್ದೇಶನ ಮಾಡಿರುವ ಹೆಸರುಗಳು, ಪಕ್ಷದೊಂದಿಗೆ ಗುರುತಿಸಿಕೊಂಡ ನಾಯಕರಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದ್ದರಿಂದ ಸರ್ಕಾರ ನೀಡಿರುವ ಪಟ್ಟಿಗೆ ತಡೆ ನೀಡಬೇಕು ಎಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಅಂದಹಾಗೆ ಸರ್ಕಾರ ರಾಜ್ಯಪಾಲರಿಗೆ ನೀಡಿರುವ ಪಟ್ಟಿಯಲ್ಲಿ ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹಮ್ಮದ್ ಸರಡಗಿ, ಇಂಟೆಕ್ ಮುಖಂಡ ಶಾಂತಕುಮಾರ್ ಮತ್ತು ಚಿತ್ರನಟಿ ಡಾ.ಜಯಮಾಲಾ ಅವರ ಹೆಸರುಗಳಿವೆ ಎಂದು ತಿಳಿದುಬಂದಿದೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಅವಧಿ ಜೂ.29ರವರೆಗೆ ಇದ್ದು, ಅದಕ್ಕೂ ಮುನ್ನ ಅವರು ಪಟ್ಟಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಯೇ? ಎಂದು ಕಾದು ನೋಡಬೇಕು.












Click it and Unblock the Notifications