ಬೆಂಗಳೂರು ಕಾರ್ಯಕಾರಿಣಿಗೆ ತೆರೆ, ಮುಖ್ಯಾಂಶಗಳು
ಬೆಂಗಳೂರು, ಏ. 4 : ಬೆಂಗಳೂರಿನಲ್ಲಿ ನಡೆಯುತ್ತಿದ್ದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸಭೆಯ ಸಮಾರೋಪ ಭಾಷಣ ಮಾಡಿದರು. ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭಾಷಣ ಮಾಡಲು ನಿರಾಕರಿಸಿ ಮೌನಕ್ಕೆ ಶರಣಾದರು.
ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಕ್ಯಾಪಿಟಲ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಸಭೆಯ ವಿವರಗಳನ್ನು ನೀಡಿದರು. ಭೂ ಸ್ವಾಧೀನ ಕಾಯ್ದೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ಬಗ್ಗೆ ಎದೆಗುಂದುವುದು ಬೇಡ ಎಂದು ಮೋದಿ ಕಾರ್ಯಕರ್ತರಿಗೆ ಕರೆ ನೀಡಿದರು ಎಂದು ಜೇಟ್ಲಿ ತಿಳಿಸಿದರು.[ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧ]

ಮೋದಿ ಭಾಷಣ : ಭೂ ಸ್ವಾಧೀನ ತಿದ್ದುಪಡಿ ಮಸೂದೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಕಾಂಗ್ರೆಸ್ ಭೂಸ್ವಾಧೀನ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಅನಗತ್ಯವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿರುವ ಮೋದಿ ಕಾಂಗ್ರೆಸ್ ಹೋರಾಟಕ್ಕೆ ಎದೆಗುಂದುವುದು ಬೇಡ ಎಂದು ಸಲಹೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ತಿರುಗೇಟು ನೀಡೋಣ ಎಂದು ಹೇಳಿದ್ದಾರೆ. [ಚಿತ್ರಗಳಲ್ಲಿ ಬಿಜೆಪಿ ಕಾರ್ಯಕಾರಿಣಿ]
ಸರ್ಕಾರದ ಭೂಸ್ವಾಧೀನ ಮಸೂದೆ ರೈತ ವಿರೋಧಿ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿಯೂ 2013ರ ಕಾಯ್ದೆ ರೈತ ವಿರೋಧಿಯಾಗಿತ್ತು. ಅದನ್ನು ತಿದ್ದುಪಡಿ ಮಾಡಿ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಜೇಟ್ಲಿ ಹೇಳಿದ್ದೇನು? : ಮೋದಿ ಅವರ ಭಾಷಣ ವಿಭಿನ್ನವಾಗಿತ್ತು. ತಮ್ಮ ಭಾಷಣದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದರು. ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕಚೇರಿ ತೆರೆಯಬೇಕು. ಯಾವ ರೀತಿಯ ಕಚೇರಿ ಬೇಕು ಎನ್ನುವುದನ್ನು ಪಕ್ಷ ನಿರ್ಧರಿಸಲಿದೆ ಎಂದು ಜೇಟ್ಲಿ ವಿವರಣೆ ನೀಡಿದರು.

ಪ್ರಮುಖ ನಿರ್ಧಾರಗಳು
* ಮೇ 26ರಂದು ಸರ್ಕಾರಕ್ಕೆ ಬಂದು ಒಂದು ವರ್ಷ, ಪ್ರತಿ ಪೋಲಿಂಗ್ ಬೂತ್‍ನಲ್ಲಿ ಕಾರ್ಯಕ್ರಮ ಆಯೋಜನೆ
* ಪಂಡಿತ್ ದೀನದಯಾಳ್ ಜನ್ಮಶತಮಾನೋತ್ಸವ ಆಚರಿಸಬೇಕು
* ಸದಸ್ಯತ್ವ ಅಭಿಯಾನ ಯಶಸ್ವಿಯಾಗಿದ್ದು ಮೇ ಅಥವ ಜೂನ್‌ನಲ್ಲಿ ಮಹಾ ಸಂಪರ್ಕ ಅಭಿಯಾನ ನಡೆಸಬೇಕು
* ಏ.14ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು
* ಭೂ ಸ್ವಾಧೀನ ಮಸೂದೆ ಬಗ್ಗೆ ಇರುವ ಗೊಂದಲ ಬಗೆಹರಿಸುವುದು












Click it and Unblock the Notifications