ಎಲ್ಲರೆದುರೇ ಪಕ್ಷ ಬಿಡುತ್ತೇನೆ ಎಂದು ನಿರ್ಧಾರ ತಿಳಿಸಿದ ಬಿಜೆಪಿ ನಾಯಕ
ಬಣ ಬಡಿದಾಟ ಹಾಗು ರಾಜ್ಯಾಧ್ಯಕ್ಷರ ಚುನಾವಣೆ ವಿಚಾರಗಳಿಂದ ಕರ್ನಾಟಕ ಬಿಜೆಪಿಯು ಸದ್ಯ ವಿಲವಿಲ ಒದ್ದಾಡುತ್ತಿದೆ. ಬಿಜೆಪಿ ನಾಯಕರು ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ತಮ್ಮದೇ ನಿಲುವುಗಳನ್ನು ಮುಂದಿಡುತ್ತಿದ್ದಾರೆ. ಕೆಲವರು ಆಗಲೇ ರಾಜೀನಾಮೆಯ ಸುಳಿವನ್ನು ನೀಡುತ್ತಿದ್ದರೆ, ಪ್ರಬಲ ನಾಯಕರೊಬ್ಬರು ಬಹಿರಂಗವಾಗಿಯೇ ಪಕ್ಷ ಬಿಡುತ್ತೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.
ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹಲವು ನಾಯಕರ ಅಸಮಾಧಾನ ಹಾಗೂ ಸಂತಸಕ್ಕೆ ಕಾರಣವಾಗಿದೆ. ಸದ್ದಿಲ್ಲದೆ ಹಲವರು ಬಿಜೆಪಿ ರಾಜ್ಯಾಧ್ಯಕ್ಷರಾಗುವ ರೇಸ್‌ಗೂ ಇಳಿದಿದ್ದಾರೆ. ಆದರೆ, ಬಿಜೆಪಿ ಪ್ರಬಲ ನಾಯಕರಲ್ಲಿ ಒಬ್ಬರಾದ ಮಾಜಿ ಸಚಿವ ಶ್ರೀರಾಮುಲು ಸದ್ಯ ಬಿಜೆಪಿ ಪಕ್ಷವನ್ನು ತೊರೆಯುವ ಬಗ್ಗೆ ಎಲ್ಲರೆದುರೇ ಹೇಳಿದ್ದಾರೆ.

ಹೌದು, ನಿನ್ನೆ ನಡೆದ ಕೋರ್‌ಕಮಿಟಿ ಸಭೆಯಲ್ಲಿ ಸಂಸದ ಶ್ರೀರಾಮುಲು ಅವರು ಇತ್ತೀಚಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡು, ನಾನು ಪಕ್ಷ ಬಿಡುತ್ತೇನೆಂದು ಹೇಳಿದ್ದಾರೆಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ಸಂಡೂರು ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಂಡೂರು ಚುನಾವಣೆಯ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತು ದೂರು ನೀಡಿದ್ದರು.
ಇನ್ನು ಆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಾಯಕರ ಶ್ರಮ ಸಾಕಾಗಿಲ್ಲ ಎಂದು ಶ್ರೀರಾಮುಲು ಅವರನ್ನು ಸೇರಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಶ್ರೀರಾಮುಲು ಅವರು ನೇರವಾಗಿ ಎಲ್ಲರ ಮುಂದೆಯೇ ಪಕ್ಷ ಬಿಡುತ್ತೇನೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಪಕ್ಷದಲ್ಲಿ ಇನ್ನೂ ಕೆಲವರು ಬೈಎಲೆಕ್ಷನ್ ಸೋಲಿನ ಕುರಿತಾದ ವರದಿಯನ್ನು ಕೊಟ್ಟೇ ಇಲ್ಲ. ಅದಕ್ಕೂ ಮುನ್ನವೇ ನೀವು ಹೇಗೆ ನನ್ನನ್ನು ಕೆಲಸ ಮಾಡಿಲ್ಲ ಎನ್ನುತ್ತಿದ್ದೀರಿ? ಎಂದು ಮರುಪ್ರಶ್ನೆ ಕೇಳಿದ್ದಾರೆ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಆದರೆ ನನ್ನ ಮೇಲೆ ಸುಮ್ಮನೆ ದೂರು ಕೊಟ್ಟಿದ್ದಾರೆ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಇಲ್ಲ ಎಂದು ಹೇಳಿದ್ದಾರೆ.

ಬಳಿಕ ಸಭೆಯಲ್ಲೇ ಎಲ್ಲರ ಮುಂದೆ ನಿಮಗೆ ಇಷ್ಟವಿಲ್ಲ ಎನ್ನುವುದಾದರೆ ಹೇಳಿ, ಬೇಕಾದರೆ ನಾನು ಪಕ್ಷ ಬಿಡುತ್ತೇನೆ. ಆದರೆ, ಪಕ್ಷ ಬಿಡೋ ಮುನ್ನ ಏನು ನಡೆದಿದೆ ಅನ್ನೋದನ್ನ ಬಹಿರಂಗಪಡಿಸಿ ಬಿಡುತ್ತೇನೆ. ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಅಸಲಿಗೆ ಏನಾಗಿದೆ ಎಂಬುದನ್ನು ಹೇಳುತ್ತೇನೆ. ನಾನು ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠಾವಂತನಾಗಿಯೇ ಇದ್ದೇನೆ. ಇಲ್ಲಿ ನನ್ನಂತವರಿಗೆ ಬೆಲೆಯೇ ಇಲ್ಲ, ಕೆಲಸ ಮಾಡಿದವರಿಗೂ ಬೆಲೆಯಿಲ್ಲ ಎಂದು ಬೇಸರ ಹಂಚಿಕೊಂಡಿದ್ದಾರೆ.
ಅಲ್ಲದೆ ಸಭೆ ನಂತರ ಶ್ರೀರಾಮುಲು ಅವರು ಹೈಕಮಾಂಡ್ ನಾಯಕರಿಗೆ ಫೋನ್ ಕರೆ ಮಾಡಿ ದೂರು ನೀಡಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಸೇರಿದಂತೆ ಇನ್ನೂ ಹಲವರಿಗೆ ಸಭೆಯಲ್ಲಿ ನಡೆದ ವಿಚಾರವನ್ನು ಹೇಳಿ ನೋವು ಹಂಚಿಕೊಂಡಿದ್ದಾರೆ. ಬಳಿಕ ಬಿ.ಎಲ್.ಸಂತೋಷ್ ಅವರು ಶ್ರೀರಾಮುಲು ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ಒಂದು ಮಾತು ಬರುತ್ತೆ, ಹೋಗುತ್ತೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು ಸಮಸ್ಯೆಗಳನ್ನ ಪರಿಹರಿಸುತ್ತೆ ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications