K.Sudhakar: ಸಂಸದ ಕೆ.ಸುಧಾಕರ್ ಕಾಂಗ್ರೆಸ್ ಸೇರುವ ಸುಳಿವು ಕೊಟ್ಟ ಸಚಿವ
ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಕಹಳೆ ಊದಿದ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಖುದ್ದು ಕಾಂಗ್ರೆಸ್‌ನ ಪ್ರಭಾವಿ ಸಚಿವರೊಬ್ಬರು ಸುಧಾಕರ್ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಅವರು ಬಹಿರಂಗ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ಬಿಜೆಪಿ ಸಂಸದ ಡಾ.ಸುಧಾಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎನ್ನುತ್ತಿದ್ದಾರೆ. ಸುಧಾಕರ್ ಮಾತ್ರವಲ್ಲ ಇನ್ನೂ ಹಲವರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ. ಈ ಬಗ್ಗೆ ನಮ್ಮ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಅಲ್ಲದೆ ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರವಿದ್ದಂತೆ, ಹೀಗಾಗಿ ಪಕ್ಷಕ್ಕೆ ಯಾರೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ, ಪಕ್ಷವನ್ನು ಕಟ್ಟಲೇಬೇಕಾಗಿದೆ. ಕೇವಲ ಸುಧಾಕರ್ ಮಾತ್ರಲ್ಲ, ಇನ್ನೂ ಹಲವರು ಕೂಡ ಕಾಂಗ್ರೆಸ್ ಬರಬೇಕು ಎಂದು ಮುಂದೆ ಬಂದಿದ್ದಾರೆ. ಇನ್ನು ನಾವು ಯಾರೇ ಬಂದರೂ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಆದರೆ ಅಂತಿಮವಾಗಿ ಈ ತೀರ್ಮಾನ ಹೈಕಮಾಂಡ್‌ನಿಂದ ಆಗಲಿದೆ ಎಂದು ಮುನಿಯಪ್ಪ ಹೇಳಿದ್ದಾರೆ.
ಈ ಹಿಂದೆ ಸುಧಾಕರ್ ಅವರು ಕಾಂಗ್ರೆಸ್‌ನಲ್ಲೇ ಇದ್ದವರು. ಕಾಂಗ್ರೆಸ್‌ನಿಂದಲೇ ಅವರು ರಾಜಕೀಯಕ್ಕೆ ಬಂದವರು. ಆದರೆ, ದಿಢೀರನೆ ಅವರು ಗುಂಪಾಗಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ಚಿಕ್ಕಬಳ್ಳಾಪುರ ಜನತೆಗೆ ಶಾಕ್ ನೀಡಿದ್ದರು. ಬಳಿಕ ಶಾಸಕರಾಗಿದ್ದ ಅವರು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಖಾತೆ ಗಿಟ್ಟಿಸಿಕೊಳ್ಳುವ ಮೂಲಕ ಪ್ರಭಾವಿ ಸಚಿವರಾಗಿ ಹೊರಹೊಮ್ಮಿದರು.
ಬಳಿಕ ಚಿಕ್ಕಬಳ್ಳಾಪುರದಲ್ಲಿ ಸತತ ಗೆಲುವು ಕಂಡಿದ್ದ ಸುಧಾಕರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಮಣಿಸಿದ್ದರು. ಬಳಿಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರೂ ಆಗಿದ್ದಾರೆ. ಆದರೆ ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ಉರಿಯುತ್ತಿರುವ ಬಣ ರಾಜಕೀಯ ಹಾಗೂ ವಿಜಯೇಂದ್ರ ಅವರ ನಡೆಗೆ ಸುಧಾಕರ್ ಅವರು ಆಕ್ರೋಶ ಹೊರಹಾಕಿದ್ದರು.

ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ವಿಜಯೇಂದ್ರ ವಿರುದ್ಧ ಮಾಧ್ಯಮಗಳ ಎದುರೇ ಅವರು ವಾಗ್ದಾಳಿ ನಡೆಸಿದ್ದರು. ಈ ಮೂಲಕ ಅವರು ಪಕ್ಷದ ಮೇಲಿನ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸುಧಾಕರ್ ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ವಿಜಯೇಂದ್ರ ಬಗ್ಗೆ ಈಗಾಗಲೇ ದೂರು ನೀಡಿರುವ ಸುಧಾಕರ್ ಅವರು ಒಂದು ವೇಳೆ ಹೈಕಮಾಂಡ್ ಇದಕ್ಕೆ ಸ್ಪಂದಿಸದಿದ್ದರೆ ಮತ್ತೆ ಕಾಂಗ್ರೆಸ್ ಸೇರುವುದು ಫಿಕ್ಸ್ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಇತ್ತೀಚೆಗೆ ಗೌರಿಬಿದನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ಸಿಎಂ ಸಿದ್ದರಾಮಯ್ಯ ಅವರನ್ನು ಸುಧಾಕರ್ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬೆಳವಣಿಗೆ ಬಳಿಕವೇ ಸುಧಾಕರ್ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ಜೋರಾಗಿವೆ. ಇದೀಗ ಸಚಿವ ಮುನಿಯಪ್ಪ ಅವರ ಹೇಳಿಕೆಯು ಸುಧಾಕರ್ ಅವರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪುಷ್ಟಿ ನೀಡಿದೆ.












Click it and Unblock the Notifications