ಡಿಸೆಂಬರ್ ಬಳಿಕ ಚುನಾವಣೆ ನಡೆದು ಬಿಜೆಪಿ ಸರ್ಕಾರ ಮತ್ತೆ ಬರುತ್ತೆ: ಭವಿಷ್ಯ ನುಡಿದ ಪ್ರಭಾವಿ ರಾಜಕಾರಣಿ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾಗುತ್ತಾರೆ, ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರೆ ಎನ್ನುವ ಮಾತುಗಳೇ ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಬಿಜೆಪಿ ನಾಯಕರು ಕೂಡ ಇದೇ ಮಾತು ಹೇಳುತ್ತಾ ಕಾಂಗ್ರೆಸ್ ನಾಯಕರ ಕಾಲೆಳೆಯುತ್ತಿತ್ತು. ಈ ವರ್ಷದೊಳಗೆ ಕಾಂಗ್ರೆಸ್‌ನಲ್ಲೇ ಸಿಎಂ ಬದಲಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರವೇ ಉರುಳುತ್ತೆ ಎಂಬ ಸುಳಿವು ನೀಡಿದ್ದಾರೆ ಬಿಜೆಪಿಯ ಹಿರಿಯ ರಾಜಕಾರಣಿ ಹಾಗೂ ಸಂಸದ ಗೋವಿಂದ ಕಾರಜೋಳ. ಡಿಸೆಂಬರ್ ನಂತರ ಬಿಜೆಪಿ ಸರ್ಕಾರ ರಚನೆಯಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂದು ಭಾರೀ ಚರ್ಚೆಗಳಾಗುತ್ತಿವೆ. ಕಾಂಗ್ರೆಸ್ ಪ್ರಭಾವಿ ಸಚಿವ ಕೆ.ಎನ್ ರಾಜಣ್ಣ ನೀಡಿರುವ ಈ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. ಹೀಗಿರುವಾಗಲೇ ಕಾರಜೋಳ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಡಿಸೆಂಬರ್ ಬಳಿಕ ಯಾವುದೇ ಸಂದರ್ಭದಲ್ಲೂ ಮಧ್ಯಂತರ ಚುನಾವಣೆ ಬರಲಿದೆ ಎಂದು ಚಿತ್ರದುರ್ಗದಲ್ಲಿ ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.
2028ಕ್ಕೆ ವಿಧಾನಸಭೆ ಚುನಾವಣೆ ಬರುತ್ತೆ ಎಂದು ನಾನು ಹೇಳುವುದಿಲ್ಲ. ಈ ಡಿಸೆಂಬರ್ ನಂತರ ಯಾವುದೇ ಸಮಯದಲ್ಲೂ ಚುನಾವಣೆ ನಡೆಯಬಹುದು. 150 ಶಾಸಕರೊಂದಿಗೆ ಬಿಜೆಪಿ ಸರ್ಕಾರ ರಚಿಸುತ್ತೆ. ಈ ಭರವಸೆ ನನಗಿದೆ. ಈಗಿರುವ ಕಾಂಗ್ರೆಸ್ ಸರ್ಕಾರ ಒಂದೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜ್ಯದ ಜನ ಶಾಪ ಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಲ್ಲರೂ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂದು ವಾದಿಸುತ್ತಿದ್ದರೆ, ಈ ನಡುವೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡ ಕೆಲವೇ ದಿನಗಳಲ್ಲಿ ಈ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ, 2026ರಲ್ಲೇ ಚುನಾವಣೆ ನಡೆಯುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿ ನಡೆಯುವ ಕುರಿತು ಕೆ.ಎನ್.ರಾಜಣ್ಣ ಅವರಿಗೆ ಮಾಹಿತಿ ಇರಬೇಕು. ಇಲ್ಲದಿದ್ದರೆ ಅವರು ಆ ರೀತಿ ಹೇಳುತ್ತಿರಲಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಬ್ಯಾಟಿಂಗ್ ಬೀಸಿದ್ದಾರೆ. ರಾಜಣ್ಣ ಆ ರೀತಿ ಹೇಳಿದ್ದಾರೆ. ಆದರೆ ನಮ್ಮ ಗಮನಕ್ಕೆ ಅಂತಹ ಯಾವುದೇ ವಿಚಾರ ಬಂದಿಲ್ಲ. ಅವರವರ ಗಮನಕ್ಕೆ ಬಂದಂತೆ ಅವರು ಮಾತನಾಡುತ್ತಾರೆ. ರಾಜಣ್ಣ ಅವರಿಗೆ ಈ ಬಗ್ಗೆ ಏನಾದರೂ ಸುಳಿವು ಸಿಕ್ಕಿರಬಹುದು. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಆ ರೀತಿ ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನ ಅವರೇ ಹೇಳಬೇಕು ಎಂದಿದ್ದರು.
ಸಿಎಂ ಸಿದ್ದರಾಮಯ್ಯನವರ ದುರ್ಬಲ ನಾಯಕತ್ವದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಪವರ್ ಸೆಂಟರ್‌ಗಳು ಹುಟ್ಟಿಕೊಂಡಿದ್ದು, ಇದರಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಅಥವಾ ಮುಖ್ಯಮಂತ್ರಿ ಬದಲಾವಣೆಯಿಂದ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದೊಂದೇ ಈ ಸಮಸ್ಯಗೆ ಶಾಶ್ವತ ಪರಿಹಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications