ಅವರ ಹೆಸರು ಹೇಳೋದಕ್ಕೂ ಸಿದ್ದರಾಮಯ್ಯ ನಾಲಾಯಕ್: ಬಿಜೆಪಿ ನಾಯಕ ವಾಗ್ದಾಳಿ
ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಇತ್ತೀಚೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದನ್ನು ಉಲ್ಲೇಖಸಿ, ಗಂಭೀರ ಆರೋಪವೂ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣನವರ ಹೆಸರು ಹೇಳುವುದಕ್ಕೂ ಸಿದ್ದರಾಮಯ್ಯ ನಾಲಾಯಕ್ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಂಗೊಳ್ಳಿ ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿಕೊಂಡಿಲ್ಲ. ರಾಯಣ್ಣ ನಿಮ್ಮಂತೆ 14 ಸೈಟ್ ಪಡೆದಿಲ್ಲ ಎಂದು ಮುಡಾ ಹಗರಣವನ್ನು ಉಲ್ಲೇಖಿಸಿ ಖಾರವಾಗಿ ಮಾತನಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಜೊತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಈ ವಿಚಾರದಲ್ಲಿ ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಯಣ್ಣನ ಹೆಸರು, ರಾಣಿ ಚೆನ್ನಮ್ಮನ ಹೆಸರು ಹೇಳಲು ನೀವು ಲಾಯಕ್ ಅಲ್ಲ ಎಂದಿದ್ದಾರೆ.

ಸಂಗೊಳ್ಳಿ ರಾಯಣ್ಣನಿ ಅವರನ್ನು ಬಾಂಧವರೇ ಹಿಡಿದುಕೊಟ್ಟಂತೆ ನನಗೂ ದ್ರೋಹ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ರಾಯಣನನ್ನು ಹಿಡಿದುಕೊಟ್ಟಿದ್ದು ದೇಶದ್ರೋಹತನ. ಅದನ್ನು ನಾವೂ ಒಪ್ಪುತ್ತೇವೆ. ಆದರೆ, ನಿಮ್ಮನ್ನು ಯಾರು ಹಿಡಿದು ಕೊಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ನಿಮ್ಮ ಪಕ್ಷದಲ್ಲಿ ಸಿಎಂ ಆಗಬೇಕು ಎಂದು ತುದಿಗಾಲಲ್ಲಿ ನಿಂತಿರುವವರೇ ನಿಮ್ಮನ್ನು ಬಲಿ ಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ನಾಡಿಗಾಗಿ ನಿಸ್ವಾರ್ಥ ಬಲಿದಾನ ಮಾಡಿದವರು ರಾಯಣ್ಣ. ನೀವು ಯಾವ ನಾಡಿಗೆ ಅದೇನು ಕೀರ್ತಿ ತಂದಿದ್ದೀರಿ? ನೀವು ಯಾವ ರಾಜ್ಯಕ್ಕೆ ದಂಡನಾಯಕನ ಕೆಲಸ ಮಾಡಿದ್ದೀರಿ? ಎಂದು ಗುಡುಗಿದ್ದಾರೆ. ಸಂಗೊಳ್ಳಿ ರಾಯಣ್ಣನ ಹೆಸರು ಹೇಳುವ ನೈತಿಕತೆ ಸಿಎಂ ಸಿದ್ದರಾಮಯ್ಯಗ ಅವರಿಗಿಲ್ಲ. ಹೀಗಾಗಿ ಅವರು ಕೂಡಲೇ ರಾಜ್ಯದ ಕ್ಷಮೆ ಕೇಳಬೇಕು. ಸಂಗೊಳ್ಳಿ ರಾಯಣ್ಣನ ನಿಸ್ವಾರ್ಥ ಮನೋಭಾವವನ್ನು ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಅವರನ್ನು ನಮ್ಮವರೇ ಕುತಂತ್ರದಿಂದ ಬ್ರಿಟೀಷರಿಗೆ ಹಿಡಿದುಕೊಟ್ಟಿದ್ದರು. ಬ್ರಿಟಿಷರು 400 ವರ್ಷ ನಮ್ಮ ದೇಶವನ್ನು ಆಳಲು ನಮ್ಮವರ ಪಿತೂರಿಯೇ ಕಾರಣ ಎಂದು ಭಾಷಣ ಮಾಡಿದ್ದರು.
ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟವರು ನಮ್ಮವರೇ ಆದ ಮನೆ ಮುರುಕರು. ನಮ್ಮ ನಡುವೆಯೇ ಇಂತಹ ಮನೆ ಮುರುಕರು ಹಿಂದೆಯೂ ಇದ್ದರು. ಮುಂದೆಯೂ ಇರುತ್ತಾರೆ. ಅಂತಹವರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು. ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದಿದ್ದರು.
ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮ ಗಾಂಧಿ, ವಿವೇಕಾನಂದರು ಸೇರಿದಂತೆ ಎಲ್ಲ ನಾಯಕರ ಬದುಕು ನಮಗೆ ಸ್ಫೂರ್ತಿಯಾಗಬೇಕು. ಈ ಕಾರಣಕ್ಕೆ ವಿಮಾನ ನಿಲ್ದಾಣಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ ಎಂದಿದ್ದರು. ಇದೇ ವಿಚಾರವಾಗಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.












Click it and Unblock the Notifications