ಬನ್ನಿ ನಿಮ್ಮನ್ನು ಗೆಲ್ಲಿಸುತ್ತೇವೆ: ಸಿದ್ದರಾಮಯ್ಯಗೆ ಬಿಜೆಪಿ ಶಾಸಕನ ಆಫರ್
ಬೆಂಗಳೂರು, ಮಾರ್ಚ್ 30: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಟ್ಟಾ ರಾಜಕೀಯ ವಿರೋಧಿ, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎನ್ನುವ ಆಫರ್ ಅನ್ನು ಬಹಿರಂಗವಾಗಿ ನೀಡಿದ್ದಾರೆ.
"ಬಾದಾಮಿಯಲ್ಲಿ ಚಿಮ್ಮನಕಟ್ಟಿಯವರು ನನ್ನ ಜೊತೆಗೆ ಶಾಸಕರಾಗಿದ್ದವರು, ಎರಡು ಸಲ ಮಂತ್ರಿಯಾಗಿದ್ದವರು. ಅವರ ಸೀಟನ್ನು ಕಿತ್ತುಕೊಂಡು, ಅದು ಮಾಡುತ್ತೀನಿ, ಇದು ಮಾಡುತ್ತೀನಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಿ" ಎಂದು ಸಿದ್ದರಾಮಯ್ಯನವರ ವಿರುದ್ದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
"ಬಾದಾಮಿಯಲ್ಲಿ 1,600 ಮತಗಳ ಅಂತರದಿಂದ ಗೆದ್ದ ಸಿದ್ದರಾಮಯ್ಯನವರನ್ನು ಚಿಮ್ಮನಕಟ್ಟಿಯವರನ್ನು ಮೂಲೆಗುಂಪು ಮಾಡಿದರು. ನಿಮಗೋಸ್ಕರ ಸೀಟು ಬಿಟ್ಟು ಕೊಡುವವನಿಗೆ ಅವರು ಕೃತಜ್ಞತೆಯನ್ನು ತೋರಲಿಲ್ಲ. ಕೊನೆಗೆ ಚಿಮ್ಮನಕಟ್ಟಿಯವರೇ ಬೇಸತ್ತು ಏ.. ಸಿದ್ದರಾಮಯ್ಯ ಗೆಟೌಟ್ ಎಂದು ಆಕ್ರೋಶ ಹೊರಹಾಕಿದರು"ಎಂದು ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

"ಮುಖ್ಯಮಂತ್ರಿಯಾಗಿದ್ದವನು ಇವತ್ತು ಕ್ಷೇತ್ರ ಹುಡುಕುತ್ತಿದ್ದಾನೆ, ಇದು ಇಡೀ ನಮ್ಮ ಸಮಾಜಕ್ಕಾಗುತ್ತಿರುವ ಅವಮಾನ. ಇದಕ್ಕಿಂತ ದೊಡ್ಡ ನಾಚಿಕೆ ಇನ್ನೊಂದು ಬೇಕಾ, ಅದಕ್ಕೆ ಎಲ್ಲಿಯೂ ಬೇಡ ಹುಣಸೂರಿಗೆ ಬಾ ಎಂದು ಅವರಿಗೆ ಆಹ್ವಾನ ನೀಡುತ್ತಿದ್ದೇನೆ"ಎಂದು ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ.
"ಹುಣಸೂರಿಗೆ ಬಂದು ನನ್ನನ್ನು ಸಿದ್ದರಾಮಯ್ಯ ಸೋಲಿಸಿದ್ದ, ಹೋಗಲಿ ಹಳೆಯದನ್ನೆಲ್ಲಾ ಮರೆಯೋಣ. ನಾವೆಲ್ಲಾ ಸೇರಿ, ಒಗ್ಗಟ್ಟಾಗಿ ನಿನ್ನನ್ನು ಹುಣಸೂರಿನಲ್ಲಿ ಗೆಲ್ಲಿಸುತ್ತೇವೆ. ನಮಗೆಲ್ಲಾ ವಿಶಾಲವಾದ ಹೃದಯವಿದೆ. ಸಮಾಜಕ್ಕೋಸ್ಕರ ನಮಗೆ ಸಂಕುಚಿತ ಮನೋಭಾವವಿಲ್ಲ"ಎಂದು ಎಚ್.ವಿಶ್ವನಾಥ್ ಹೇಳಿದರು.
"ರಾಜಕಾರಣ ಹಾಳಾಗಿ ಹೋಗಲಿ, ಮಠವನ್ನೂ ಒಡೆದಿರಿ, ಮಠ ಕಟ್ಟಿಸಿದ ನನ್ನನ್ನು ಬಿಟ್ಟು ಮಾಜಿ ಮುಖ್ಯಮಂತ್ರಿಗಳು ಬೆಳ್ಳಿಹಬ್ಬವನ್ನು ಆಚರಿಸಿಕೊಂಡರು. ಇದೇನಾ ನೀವು ನಮ್ಮ ಸಮಾಜಕ್ಕೆ ಕೊಡುವ ಗೌರವ? ಇದೇನಾ ಕುರುಬರ ಉದ್ದಾರಾ? ಎಂದು ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.












Click it and Unblock the Notifications