CT Ravi: ತಲೆಯಲ್ಲಿ ರಕ್ತಸ್ರಾವ, ಬ್ಯಾಂಡೇಜ್, ಅರೆಸ್ಟ್ ಬಳಿಕ ಸಿಟಿ ರವಿಗೆ ಏನಾಯ್ತು?
ಬೆಳಗಾವಿ ಅಧಿವೇಶನದ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎಂಬ ಆರೋಪದ ಮೇರೆಗೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ದೂರಿನ ಮೇರೆಗೆ ಸಿಟಿ ರವಿ ಅವರನ್ನು ಬಂಧಿಸಲಾಗಿದ್ದು, ಬಳಿಕ ರಾತ್ರಿಯಿಡೀ ಹೈಡ್ರಾಮಾ ನಡೆದಿದೆ. ಬಂಧನದ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಅವರ ಮೇಲೆ ಹಲ್ಲೆ ಯತ್ನ ನಡೆದಿದೆಯಾ? ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ.
ತಮ್ಮ ಬಂಧನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಟಿ ರವಿ ಅವರು ಪೊಲೀಸರು ಹಾಗೂ ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದೂ ಅವರು ವಿಡಿಯೋ ರಿಲೀಸ್ ಮಾಡಿದ್ದಾರೆ. ಬಂಧನದ ಬಳಿಕ ಅವರ ಮೇಲೆ ಹಲ್ಲೆ ನಡೆದಿದೆಯಾ? ಎಂಬ ಅನುಮಾನಗಳು ಕೂಡ ವ್ಯಕ್ತವಾಗಿದ್ದು, ತಲೆಯಿಂದ ರಕ್ತ ಸುರಿಯುತ್ತಿರುವ ಹಾಗೂ ಬ್ಯಾಂಡೇಜ್ ಕಟ್ಟಿಕೊಂಡಿರುವ ಫೋಟೋ, ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಸಿ.ಟಿ.ರವಿ ಅವರು ಹಂಚಿಕೊಂಡಿರುವ ವಿಡಿಯೋ ಪ್ರಕಾರ ಅವರಿಗೆ ಪೊಲೀಸ್ ಕಸ್ಟಡಿಯಲ್ಲಿ ಈ ರೀತಿ ತಲೆಗೆ ತೀವ್ರ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಕಸ್ಟಡಿಯಲ್ಲಿ ಅವರ ಮೇಲೆ ದೈಹಿಕ ಹಲ್ಲೆ ಕೂಡ ನಡೆದಿರುವುದಾಗಿ ಅವರು ಆರೋಪ ಮಾಡಿದ್ದಾರೆ. ಅಲ್ಲದೆ ಪೊಲೀಸರು ಚಿಕಿತ್ಸೆ ಕೊಡಿಸಲು ಕೂಡ ವಿಳಂಬ ಮಾಡಿರುವುದಾಗಿ ದೂರಿದ್ದಾರೆ. ಕರ್ನಾಟಕದಲ್ಲಿ ಯಾರೂ ಸುರಕ್ಷಿತ ಅಲ್ಲ ಎಂದೂ ಸಿಟಿ ರವಿ ತಲೆಗೆ ಆದ ಗಾಯಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಕರ್ನಾಟಕ ಪೊಲೀಸರು ಸುಮಾರು ಮೂರು ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಅಲ್ಲದೆ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್‌ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ಇನ್ನು ಖಾನಾಪುರದಿಂದ ಬೆಂಗಳೂರಿಗೆ ಸಿಟಿ ರವಿ ಅವರನ್ನು ಪೊಲೀಸರು ಶಿಫ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ತಡರಾತ್ರಿ 12.15 ಗಂಟೆ ಸುಮಾರಿಗೆ ಸಿಟಿ ರವಿ ಅವರನ್ನು ಹೆಗಲ ಮೇಲೆ ಹೊತ್ತಿಕೊಂಡು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ಈ ವೇಳೆ ಸಿಟಿ ರವಿ ಅವರ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ರವಿ ಅವರು ಕಾಪಾಡಿ, ಕಾಪಾಡಿ, ನನ್ನನ್ನ ಕೊಲ್ತಾರೆ ಎಂದು ಕಿರುಚಾಡಿದ್ದಾರೆ. ಬಳಿಕ ಕೆಲ ಗಂಟೆಗಳವರೆಗೆ ತಮಗೆ ಚಿಕಿತ್ಸೆ ಕೊಡಿಸಲು ಸಹ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ರವಿ ಆರೋಪ ಮಾಡಿದ್ದಾರೆ.
ವಿಡಿಯೋದಲ್ಲಿ ಸಿ.ಟಿ.ರವಿ ಹೇಳಿದ್ದೇನು?: ಬಂಧನದ ಬಳಿಕ ವಿಡಿಯೋ ಹಂಚಿಕೊಂಡಿರುವ ಸಿ.ಟಿ.ರವಿ ಅವರು ನನ್ನನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ನನ್ನ ಮೇಲೆ ಯಾವ ಕೇಸ್ ದಾಖಲಾಗಿದೆ ಎಂಬುದೇ ನನಗೆ ಹೇಳುತ್ತಿಲ್ಲ. ನಾನು ಕೊಟ್ಟಿರುವ ದೂರನ್ನು ಎಷ್ಟು ಹೊತ್ತಾದರೂ ಸ್ವೀಕರಿಸಲಿಲ್ಲ, ಈಗ ನನ್ನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾರೆ. ನನ್ನ ಜೀವಕ್ಕೆ ಅಪಾಯವಿದ್ದು, ನನಗೆ ಏನಾದರೂ ಅಪಾಯ ಆದರೆ, ಅದಕ್ಕೆ ಈ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಸಿಟಿ ರವಿ ಹೇಳಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸುಳ್ಳು ದೂರು ದಾಖಲಿಸಿ, ನನ್ನ ಕೊಲೆಗೆ ಸಂಚು ನಡೆಸಿದ್ದಾರೆ ಎಂದೂ ಆರೋಪಿಸಿದ್ದಾರೆ.












Click it and Unblock the Notifications