ಗೃಹಲಕ್ಷ್ಮಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಎಸ್‌ಟಿ ಸೋಮಶೇಖರ್ ಸಭೆ- ಕಾಂಗ್ರೆಸ್ ಸೇರ್ಪಡೆ ಗ್ಯಾರಂಟಿ?
ಬೆಂಗಳೂರು, ಆಗಸ್ಟ್ 28: ಗೃಹಲಕ್ಷ್ಮಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಲೋಕಸಭೆ ಚುನಾವಣೆಗೂ ಮುನ್ನ ಸೋಮಶೇಖರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಮಶೇಖರ್ ನಡೆದುಕೊಳ್ಳುತ್ತಿರುವುದು ವದಂತಿಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ.
ಬಿಜೆಪಿ ವಿರುದ್ಧ ಹರಿಹಾಯ್ದ ಎಸ್‌ಟಿ ಸೋಮಶೇಖರ್
ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಅವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲೂ ತಮಗೆ ಯಾವುದೇ ಬಿಜೆಪಿ ನಾಯಕರು ಆಹ್ವಾನಿಸಿಲ್ಲವೆಂದು ಆರೋಪಿಸಿದ್ದಾರೆ.

ನಾನು ಬಿಜೆಪಿಯಲ್ಲೇ ಉಳಿಯಲು ಬಯಸಿದರೂ, ಪಕ್ಷದಲ್ಲಿ ನನಗೆ ಉತ್ತಮ ವಾತಾವರಣ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದ್ದಾರೆ.
'ಸ್ಥಳೀಯ ಬಿಜೆಪಿ ನಾಯಕರೇ ಕಾಂಗ್ರೆಸ್ ಸೇರುವ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ. ನಾನು ಬಿಜೆಪಿ ತೊರೆಯುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ರಾಜ್ಯ ಅಥವಾ ಜಿಲ್ಲಾ ಮಟ್ಟದ ಬಿಜೆಪಿ ನಾಯಕರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸ್ಥಳೀಯ ಮಟ್ಟದ ನಾಯಕರು ನನ್ನ ವಿರುದ್ಧ ಕೆಲಸ ಮಾಡಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸ್ಥಳೀಯ ಮುಖಂಡರು ಯೋಜನೆ ರೂಪಿಸಿದ್ದರು' ಎಂದು ಸೋಮಶೇಖರ್ ಹೇಳಿದ್ದಾರೆ.
ಸಿದ್ದರಾಮಯ್ಯರನ್ನು ಬೇಟಿ ಮಾಡಿದ ಸೋಮಶೇಖರ್
ಸೋಮಶೇಖರ್ ಅವರು ಕಳೆದ ವಾರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಆ ಬಳಿಕ, ಯಶವಂತಪುರ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಅನುದಾನ ಘೋಷಣೆ ಮಾಡಿತ್ತು.
ಇದಾದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತಮ್ಮ ರಾಜಕೀಯ ಗುರು ಎಂದು ಸೋಮಶೇಖರ್ ಕರೆದಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಸೋಮಶೇಖರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾದಂತಿದೆ.
ಹೆಚ್ಚುತ್ತಿವೆ ಆಪರೇಷನ್ ಹಸ್ತದ ವದಂತಿಗಳು
ಸೋಮಶೇಖರ್ ಅಷ್ಟೇ ಅಲ್ಲದೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಹರಡಿಕೊಂಡಿವೆ. ಶಿವರಾಮ್ ಹೆಬ್ಬಾರ್ ಸಹ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೈರತಿ ಬಸವರಾಜ ಅವರು ಯಡಿಯೂರಪ್ಪ ನಡೆಸಿದ್ದ ಸಭೆಗೆ ಗೈರಾಗಿದ್ದರು. ಇದು ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ ಮನೇನಕೊಪ್ಪ ಹಾಗೂ ಮಾಜಿ ಶಾಸಕ ಚಿಕ್ಕನ ಗೌಡರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಧಾರವಾಡ ಜಿಲ್ಲೆಯಲ್ಲಿ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications