ಶಾಸಕ ಮುನಿರತ್ನ, ಬಿಜೆಪಿಗೆ 'ವಿಚಿತ್ರ' ಹೆಸರಿಟ್ಟ ಕಾಂಗ್ರೆಸ್; ಏನು ಗೊತ್ತಾ?
ಕೊಲೆ ಬೆದರಿಕೆ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣಗಳು ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸುತ್ತಿಕೊಂಡಿದೆ. ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ಮುನಿರತ್ನ ಅವರ ಕೇಸ್ ಮುಂದಿಟ್ಟುಕೊಂಡು ವ್ಯಂಗ್ಯ ಕೂಡ ಮಾಡುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ʼಅತ್ಯಾಚಾರ ಪ್ರಕರಣದಲ್ಲಿ ಮತ್ತೊಮ್ಮೆ ವಿಕೃತರತ್ನ ಮುನಿರತ್ನನ ಬಂಧನವಾಗಿದೆ. ಬಲಾತ್ಕಾರಿ ಜನತಾ ಪಾರ್ಟಿಯ ಮುಕುಟದ ಮುತ್ತು ರತ್ನಗಳ ಹೊಳಪು ಫಳ ಫಳ ಹೊಳೆಯುತ್ತಿವೆ!ʼ ಎಂದು ವ್ಯಂಗ್ಯವಾಡಿದೆ.

ʼಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಶೋಷಿಸುವುದು, ನಿಂದಿಸುವುದು ಕರ್ನಾಟಕ ಬಿಜೆಪಿಯವರ ಬೇಸಿಕ್ ಎಲಿಜಿಬಿಲಿಟಿಯೇ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಏಕೆ ಮಾತನಾಡುತ್ತಿಲ್ಲ? ಎಲ್ಲಿ ನಾಪತ್ತೆಯಾಗಿದ್ದಾರೆ?ʼ ಎಂದು ಕಾಲೆಳೆದಿದೆ.
ʼಬಿಜೆಪಿಯ ಬ್ರಾಹ್ಮಣ ನಾಯಕರಾದ ಜೋಶಿಯವರು ಮುನಿರತ್ನನನ್ನು ಸಮರ್ಥಿಸುತ್ತಿದ್ದಾರೆ, ಆದರೆ
ಬಿಜೆಪಿಯ ಒಕ್ಕಲಿಗ ನಾಯಕರು, ದಲಿತ ನಾಯಕರು ಏಕೆ ಮೌನವಹಿಸಿದ್ದಾರೆ? ದಲಿತರ, ಒಕ್ಕಲಿಗರ, ಮಹಿಳೆಯರ ಹಿತ ಕಾಯುವುದು ಬಿಜೆಪಿಗೆ ಇಷ್ಟವಿಲ್ಲವೇ?ʼ ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಏನಿದು ಪ್ರಕರಣ?: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿತ್ತು. ಈ ಕೇಸ್ ಸಂಬಂಧ ಅವರ ಬಂಧನವೂ ಆಗಿತ್ತು. ಮತ್ತೊಂದೆಡೆ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಈ ಸಂಬಂಧ ರಾಮನಗರ ಪೊಲೀಸರು ಕೂಡ ಮುನಿರತ್ನ ಅವರನ್ನು ವಶಕ್ಕೆ ಪಡೆದಿದ್ದರು.

ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಕೂಡ ಮಾಡಲಾಗುತ್ತಿದೆ. ಇನ್ನು ಮುನಿರತ್ನ ಅವರು ಎಚ್‌ಐವಿ ಪಾಸಿಟಿವ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಲಾಗಿದ್ದು, ಸಂತ್ರಸ್ತ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ.
ಮಹಿಳೆ ದೂರಿನಲ್ಲಿ ಹೇಳಿರುವಂತೆ ಖಾಸಗಿ ರೆಸಾರ್ಟ್‌ನಲ್ಲಿ ಆಕೆಯ ವಿರುದ್ಧ ಅತ್ಯಾಚಾರ ನಡೆದಿರುವುದಾಗಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು. ʼಕೋವಿಡ್ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ವಿಡಿಯೋ ಕಾಲ್ ಮಾಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ಬಳಿಕ ನನ್ನನ್ನು ನಗ್ನವಾಗಿ ಇರುವಂತೆ ಕರೆ ಮಾಡಿ ಒತ್ತಾಯಿಸುತ್ತಿದ್ದರು. ನಾನು ಅದಕ್ಕೆ ಒಪ್ಪಿರಲಿಲ್ಲ ಎಂದಿದ್ದಾರೆ.
ʼನನ್ನನ್ನು ಒಂದು ಸ್ಥಳಕ್ಕೆ ಬರಲು ಹೇಳಿದ್ದರು. ಅಲ್ಲಿ ನನ್ನನ್ನು ತಬ್ಬಿಕೊಳ್ಳಲು ಮುಂದಾದಾಗ ವಿರೋಧ ಮಾಡಿದ್ದೆ. ಅದಕ್ಕೆ, ಅವರು ಇದೆಲ್ಲ ರಾಜಕೀಯದಲ್ಲಿ ಕಾಮನ್ ಎಂದು ಹೇಳಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿದ್ದರು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮುನಿರತ್ನ ಅವರನ್ನು ಎರಡೂ ಕೇಸ್‌ನಲ್ಲಿ ಆರೋಪಿ ಎನ್ನಲಾಗಿದ್ದು, ಒಂದೇ ಬಾರಿಗೆ ಎರಡೆರಡು ಕೇಸ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ಕೇಸ್ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.












Click it and Unblock the Notifications