ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ: ಬೈರತಿ ಬಸವರಾಜ್
ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಭಾವಿ ಸಚಿವರೂ ಎನಿಸಿಕೊಂಡಿದ್ದ ಬೈರತಿ ಬಸವರಾಜ್ ಅವರು ದಿಢೀರನೆ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಯಾವ ಕಾರಣಕ್ಕೆ ಬೈರತಿ ಸುರೇಶ್ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಗೊತ್ತಾ?
ಇಂದು ತಮ್ಮ ಕ್ಷೇತ್ರದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಶಾಸಕ ಬೈರತಿ ಸುರೇಶ್ ಈ ಹೇಳಿಕೆ ನೀಡಿದ್ದಾರೆ. ತಮ್ಮ ಕ್ಷೇತ್ರದ ಸಾಯಿ ಲೇಔಟ್‌ಗೆ ಭೇಟಿ ನೀಡಿದ ಅವರು ಮಳೆಹಾನಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಕಳೆದ 12 ವರ್ಷಗಳಿಂದಲೂ ಈ ಸಮಸ್ಯೆ ಇದೆ. ನಾನು ಈ ಕ್ಷೇತ್ರದ ಶಾಸಕನಾಗಿ ನನ್ನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮಳೆ ಸುರಿದ ದಿನ ಕೂಡ ಬೆಳಿಗ್ಗೆ 5 ಗಂಟೆಗೆ ನಾನೇ ಖುದ್ದಾಗಿ ಸ್ಥಳಕ್ಕೆ ಧಾವಿಸಿದ್ದೆ. ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಆದರೆ ತಮ್ಮ ಕೆ.ಆರ್.ಪುರ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಲಿಲ್ಲ ಎಂದು ಬೈರತಿ ಸುರೇಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಮಳೆ ಹಾನಿಯಾಗಿರುವ ಸ್ಥಳಕ್ಕೆ ಬರಲಿಲ್ಲ ಎಂದರೆ ನಾನೇನು ಮಾಡಲು ಸಾಧ್ಯ. ಈ ಹಿಂದೆ ನಮ್ಮ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಇಲ್ಲಿ ಮಳೆ ನೀರು ತಡೆಯಲು ಕಾಮಗಾರಿ ಶುರುವಾಗಿತ್ತು. ಈಗ ಅದಕ್ಕೆ ಹಣ ಪಾವತಿ ಮಾಡಿಲ್ಲ. ಅನುದಾನ ಕೊಟ್ರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿವರವಾಗಿ ಹೇಳಿದ್ದೇನೆ. ಈ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ಮುಂದಿನ ಮಳೆಗಾಲದ ಒಳಗೆ ಕ್ಷೇತ್ರದ ಸಮಸ್ಯೆಗಳು ಬಗೆಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಬೈರತಿ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಬರಲಿಲ್ಲ ಅಂದ್ರೆ ಅವರ ಕೈ ಹಿಡಿದುಕೊಂಡು ಕರೆದುಕೊಂಡು ಬರೋಕೆ ಆಗುತ್ತಾ? ನಾನು ನನ್ನದೇ ಆದ ತತ್ವ ಸಿದ್ಧಾಂತಗಳನ್ನ ಇಟ್ಟುಕೊಂಡಿದ್ದೇನೆ. ಹಾಗಾಗಿ ಅವರು ಎಲ್ಲಿವರೆಗೂ ಬರ್ತಾರೋ ಅಲ್ಲಿವರೆಗೆ ಜೊತೆಗೆ ಹೋಗಿದ್ದೇನೆ. ಅವರು ಬರಲಿಲ್ಲ ಅಂದರೆ ನಾನೇನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಸಾಯಿ ಲೇಔಟ್‌ನಲ್ಲಿ ಮಳೆ ಮತ್ತು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮನವಿಯಲ್ಲಿರುವ ಸಮಸ್ಯೆಗಳ ಬಗ್ಗೆ ಆದ್ಯತೆ ಮೇರೆಗೆ ಗಮನ ಹರಿಸಿ, ತಕ್ಷಣಕ್ಕೆ ಸಾಧ್ಯವಿರುವ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.












Click it and Unblock the Notifications