ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆಗೆ ಅಸಮಾಧಾನ: ದೆಹಲಿಯತ್ತ ಹಲವು ನಾಯಕರು: ಯತ್ನಾಳ್ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 06: ವಿಧಾನಸಭಾ ಚುಣಾವಣೆಯ ಫಲಿತಾಂಶ ಬಂದು ಆರು ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರನ್ನ ಹೈಕಮಾಂಡ್ ನೇಮಕ ಮಾಡಿದ್ದು, ಹಲವು ಬಿಜೆಪಿಯ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ದು, ದೆಹಲಿಯತ್ತ ಮುಖ ಮಾಡಿದ್ದಾರೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕರನ್ನಾಗಿ ಬೆಂಗಳೂರು ಮೂಲದ ಆರ್ ಅಶೋಕ್ ಅವರನ್ನ ನೇಮಕ ಮಾಡಿದ್ದು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕೆಲ ಬಿಜೆಪಿ ಶಾಸಕರು ದೆಹಲಿಗೆ ತೆರಳಲು ಸಜ್ಜಾಗಿದ್ದು, ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ.

ಈ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದ್ರೆ, ಉಚಿತ ಮಾತ್ರ ಅಲ್ಲ, ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು ಎಂದು ಹೇಳಿದ್ಧಾರೆ. ನಾನಾಗಿಯೇ ದೆಹಲಿಗೆ ಹೋಗಲ್ಲ, ಕರೆ ಬಂದ ಮೇಲೆ ಹೋಗುತ್ತೇನೆ. ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಹೇಳಿರಬಹುದು. ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ವಿಪಕ್ಷ ಉಪನಾಯಕನಾಗಿ ಅರವಿಂದ್ ಬೆಲ್ಲದ್ ಆಯ್ಕೆ ಮಾಡುವ ವಿಚಾರದ ಮಾಧ್ಯಮಗಳ ಪ್ರಶ್ನೆಗೆ ಯತ್ನಾಳ್ ಮಾತನಾಡಿ, ವಿಧಾನಸಭೆ ವಿಪಕ್ಷ ಉಪನಾಯಕನಿಗೆ ಯಾವ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲಾ ತೀರ್ಮಾನ ವಿಪಕ್ಷ ನಾಯಕ, ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ. ಉಪನಾಯಕ ಅಂದ್ರೆ ವಿಪಕ್ಷ ನಾಯಕನ ಬಳಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ ಅದೇ ರೀತಿ ಕೂರಬೇಕು ಅಷ್ಟೇ. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಸ್ವಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ ಕುರಿತು ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ ಸೋಮಣ್ಣ ಜೊತೆ ಕೆಲ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಲಿದ್ದಾರೆ. ರಮೇಶ್ ಜಾರಕಿಹೊಳಿ, ವಿ ಸೋಮಣ್ಣ, ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಲ್ ಸಹ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇಂದು ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ನಿಂದ ಕರೆ ಬರುವವರೆಗೂ ದೆಹಲಿ ಹೋಗುವುದಿಲ್ಲ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.












Click it and Unblock the Notifications