ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಟ್ರೆ ಏನೆಲ್ಲ ಆಗುತ್ತೆ? ಯತ್ನಾಳ್ ಕಳವಳ
ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅನುಮತಿ ಕೊಡಿಸುವ ಬಗ್ಗೆ ವಯನಾಡು ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ಕಿಡಿಕಾರಿದ್ದಾರೆ.
2004ರಿಂದ 2007ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ 67 ಹಾಗೂ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸುಮಾರು 215 ವನ್ಯಜೀವಿಗಳು ಬಲಿಯಾಗಿದ್ದವು. ಇದನ್ನು ಮನಗಂಡಿದ್ದ ಕರ್ನಾಟಕ ಉಚ್ಚ ನ್ಯಾಯಾಲಯವು ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು ಎಂದು ಹೇಳಿದ್ದಾರೆ.

ಅಳಿವಿನಂಚಿನಲ್ಲಿರುವ ಏಷ್ಯಾ ಮೂಲದ ಆನೆಗಳು ಹಾಗೂ ಹುಲಿಗಳು ನಮ್ಮ ಬಂಡೀಪುರದಲ್ಲಿದೆ. ಇದನ್ನು ರಕ್ಷಿಸಬೇಕಾದದ್ದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕರ್ತವ್ಯ. ರಾತ್ರಿ ಸಂಚಾರದ ಅನುಮತಿ ನೀಡಿದ್ದಲ್ಲಿ, ಇಲ್ಲಿ ಓಡಾಡುವ ಪ್ರಾಣಿಗಳಿಗೆ ಆಪತ್ತು ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ರಾತ್ರಿ ಸಂಚಾರಕ್ಕೆ ಅನುಮತಿ ಕೊಟ್ಟಲ್ಲಿ, ಇಲ್ಲಿ ಅಕ್ರಮ ಬೇಟೆಗಾರರ ಹಾವಳಿ (Poaching) ಹಾಗೂ ಟಿಂಬರ್ ಮಾಫಿಯಾದವರು ಇಲ್ಲಿನ ಸಂಪತ್ತನ್ನು, ಪ್ರಾಣಿ ಸಂಕುಲವನ್ನು ನಾಶ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅರಣ್ಯದಿಂದ ಪಕ್ಕದಲ್ಲಿರುವ ಮಧುಮಲೈ, ವಯನಾಡು ಹಾಗೂ ನಾಗರಹೊಳೆ ಅರಣ್ಯಕ್ಕೆ ರಾತ್ರಿ ವೇಳೆಯಲ್ಲಿ ಪ್ರಾಣಿಗಳು ಸಂಚರಿಸುತ್ತದೆ. ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದ್ದಲ್ಲಿ, ಇವುಗಳಿಗೆ ತೊಂದರೆಯಾಗಿ, ಗ್ರಾಮಗಳಿಗೆ ಅಕ್ಕ ಪಕ್ಕದ ಹಳ್ಳಿಗಳಿಗೆ ನುಗ್ಗುವ ಅವಕಾಶವಿದೆ. ಇದರಿಂದ ಇಲ್ಲಿರುವ ಹ್ಯೂಮನ್ ಹ್ಯಾಬಿಟೇಷನ್ (human habitation) ಸಹ ಅಪಾಯವಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಪರಿಸರದ ಬಗ್ಗೆ ಕಾಳಜಿಯಿಲ್ಲದ, ಪರಿಜ್ಞಾನವಿಲ್ಲದವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದರೆ ಆಗುವ ದುರಂತ ಏನು ಎಂದು ಇಷ್ಟರಲ್ಲೇ ಗೊತ್ತಾಗುತ್ತದೆ. ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಅರಣ್ಯ ಸಚಿವರು ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಹೇಳಿದ್ದೇನು?: ಪ್ರಿಯಾಂಕಾ ಗಾಂಧಿ ಅವರು ಇತ್ತೀಚೆಗೆ ವಯನಾಡು ಲೋಕಸಭಾ ಕ್ಷೇತ್ರದ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸಿ ಸಂಸದೆಯಾಗಿ ಆಯ್ಕೆಯಾದರು. ಒಂದು ವಾರದಲ್ಲೇ ಪ್ರಿಯಾಂಕಾ ಅವರು ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದಾರೆ. ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಡುವುದೇ ನನ್ನ ಮೊದಲ ಆದ್ಯತೆ ಎಂದು ಪ್ರಿಯಾಂಕಾ ಹೇಳಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ವನ್ಯಜೀವಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಕರ್ನಾಟಕದ ಹಾಗೂ ಕೇರಳ ಭಾಗದ ವನ್ಯಜೀವಿಗಳ ಸಂರಕ್ಷಣೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಬಂಡೀಪುರ ಭಾಗದಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧವಿರುವುದು ಗೊತ್ತಿದೆ. ಇಲ್ಲಿ ಜನರಿಗೆ ಏನೆಲ್ಲ ಸಮಸ್ಯೆ ಆಗುತ್ತಿದೆ ಎನ್ನುವುದೂ ಗೊತ್ತಿದೆ. ಈ ವಿಷಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಇಲ್ಲಿ ರಾತ್ರಿ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸುವುದು ನನ್ನ ಜವಾಬ್ದಾರಿ ಎಂದಿದ್ದಾರೆ.












Click it and Unblock the Notifications