ಬಿಜೆಪಿಯಿಂದ ಗ್ರಾಮ ಪಂಚಾಯಿತಿಗಳಲ್ಲೂ ಸುಲಿಗೆ; ಕಾಂಗ್ರೆಸ್ ಅಸಮಾಧಾನ
ಬೆಂಗಳೂರು, ಏಪ್ರಿಲ್ 10; ಕರ್ನಾಟಕ ಬಿಜೆಪಿ ಸರ್ಕಾರದ ಹಣದಲ್ಲಿ ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಪಕ್ಷದ ಪ್ರಚಾರ ನಡೆಸಿದೆ. ಈ ಸಮಾವೇಶಕ್ಕೆ ಜನರನ್ನು ಕರೆಸಿದ ಬಸ್‌ಗಳ ಬಾಡಿಗೆಗೆ ಹಣ ಬಿಡುಗಡೆ ಮಾಡದೇ ಗ್ರಾಮ ಪಂಚಾಯಿತಿಗಳಲ್ಲೂ ಸುಲಿಗೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಟ್ವೀಟ್ ಮಾಡಿದೆ.
ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಜ್ಞಾಪನಾ ಪತ್ರವನ್ನು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ, ಫಲಾನುಭವಿಗಳ ಸಮಾವೇಶದ ಹೆಸರಲ್ಲಿ ಪಕ್ಷದ ಪ್ರಚಾರ ನಡೆಸಿದ ಬಿಜೆಪಿ ಕರ್ನಾಟಕ ಜನರನ್ನು ಕರೆತಂದ ಬಸ್ಸುಗಳ ಬಾಡಿಗೆ ಪಾವತಿಸದೆ ಗ್ರಾಮ ಪಂಚಾಯಿತಿಗಳಿಗೆ ಬಾಡಿಗೆ ಹೊರೆ ಹೊರೆಸಿದೆ. ಗ್ರಾಮ ಪಂಚಾಯ್ತಿಗಳನ್ನೂ ಬಿಡದೆ ಸುಲಿಗೆ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಅವರೇ, ಕನಿಷ್ಠ ನಾಚಿಕೆ ಮಾನ ಮರ್ಯಾದೆಗಳಿಲ್ಲವೇ?' ಎಂದು ಕೇಳಿದೆ.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ತೀರ್ಥಹಳ್ಳಿ ಇವರ ಜ್ಞಾಪನಾ ಪತ್ರವನ್ನು ಉಲ್ಲೇಖಿಸಿದೆ. ದಿನಾಂಕ 16/03/2023 ರಂದು ನಡೆದ ಫಲಾನುಭವಿಗಳ ಸಮ್ಮೇಳನಕ್ಕೆ ಪ್ರಯಾಣ ವ್ಯವಸ್ಥೆ ಮಾಡಿರುವ ಹಣವನ್ನು ಪಾವತಿಸುವ ಬಗ್ಗೆ ಎಂಬ ವಿಷಯವನ್ನು ಪತ್ರ ಒಳಗೊಂಡಿದೆ. ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಫಲಾನುಭವಿಗಳ ಸಮ್ಮೇಳನ/ 2022-2023) ದಿನಾಂಕ 8/3/2023 ಎಂದು ಸಹ ಉಲ್ಲೇಖಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂದಪಟ್ಟಂತೆ ದಿನಾಂಕ 16/03/2023 ರಂದು ನಡೆದ ಶಿವಮೊಗ್ಗ ಜಿಲ್ಲಾ ಫಲಾನುಭವಿಗಳ ಸಮ್ಮೇಳನಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆಯ ಮೇರೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಫಲಾನುಭವಿಗಳ ಪ್ರರ್ಯಾಣಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಸದರಿ ಪ್ರಯಾಣಕ್ಕೆ ಬಂದಿರುವ ಬಸ್‌ಗಳ ಬಿಲ್ಲುಗಳನ್ನು ಹಾಗೂ ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ವರ್ಗ-01 ಬ್ಯಾಂಕ್ ಖಾತೆಯ ವಿವರವನ್ನು ಮಾನ್ಯ ಜಿಲ್ಲಾಧಿಕಾರಿಯವರ ಕಛೇರಿಗೆ ಈಗಾಗಲೇ ಕಳುಹಿಸಿ ಸದರಿ ಅನುದಾನವನ್ನು ಬಿಡುಗಡೆಮಾಡಬೇಕೆಂದು ಕೋರಲಾಗಿರುತ್ತದೆ ಎಂದು ಜ್ಞಾಪನಾ ಪತ್ರ ಹೇಳಿದೆ.

ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯಿಂದ ಅನುದಾನ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ, ಆದ್ದರಿಂದ ಬಸ್ ವ್ಯವಸ್ಥೆ ಮಾಡಿರುವ ಬಸ್ ಮಾಲೀಕರಿಗೆ ತುರ್ತಾಗಿ ಹಣ ಪಾವತಿ ಮಾಡಬೇಕಾಗಿರುವುದರಿಂದ ಗ್ರಾಮ ಪಂಚಾಯತಿಯ ವರ್ಗ-1 ರ ಖಾತೆಯಿಂದ ಈ ಪತ್ರದೊಂದಿಗೆ ಲಗತ್ತಿಸಿರುವಂತೆ ಹಣವನ್ನು ಬಸ್ ಮಾಲೀಕರ ಖಾತೆಗೆ ವರ್ಗಾವಣೆ ಮಾಡಿ ಈ ಕಛೇರಿಗೆ ವರದಿ ನೀಡುವಂತೆ ಸೂಚಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಫಲಾನುಭವಿಗಳ ಸಮ್ಮೇಳನ; ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಶೋತ್ತರಗಳಿಗೆ ಪೂರಕವಾಗಿ ರೂಪಿಸಿ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಿರುವ ಜನಪರ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳೊಂದಿಗೆ ಸಮಾಲೋಚನೆ, ಸೌಲಭ್ಯ ಪಡೆಯುವವರು ಹಾಗೂ ಅರ್ಹರಿರುವವರಿಗೆ ಯೋಜನೆಗಳ ಮಾಹಿತಿ ಹಾಗೂ ಸಂವಾದ ನಡೆಸುವ ಉದ್ದೇಶದಿಂದ ಮಾರ್ಚ್ 16ರಂದು ಶಿವಮೊಗ್ಗ ನಗರದ ಫೀಡಂಪಾರ್ಕ್‌ನಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜನೆ ಮಾಡಲಾಗಿತ್ತು.
ಈ ಸಮಾವೇಶದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕ ಕೆ. ಎಸ್. ಈಶ್ವರಪ್ಪ, ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರಗೌಡ, ಅರುಣ್ ಹಾಗೂ ಜಿಲ್ಲಾ ಆಡಳಿತದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸಮ್ಮೇಳನದಲ್ಲಿ ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ, ಚೆಕ್ ಹಾಗೂ ವಾಹನಗಳನ್ನು ವಿತರಿಸಲಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 75 ರಿಂದ 80 ಲಕ್ಷ ಫಲಾನುಭವಿಗಳು ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯ ಹೊಂದಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸರ್ಕಾರದ ಹಲವು ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಫಲಾನುಭವಿಗಳನ್ನು ಅವರ ಊರಿನಿಂದ ಶಿವಮೊಗ್ಗಕ್ಕೆ ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಿಂದ ಈವರೆಗೆ ಸೌಲಭ್ಯ ಪಡೆದ ಹಾಗೂ ಪಡೆಯಲಿರುವ ಫಲಾನುಭವಿಗಳು ಮತ್ತು ಸಾರ್ವಜನಿಕರನ್ನು ಕರೆಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸುಮಾರು 50 ಸ್ಟಾಲ್‌ಗಳನ್ನು ಹಾಕಲಾಗಿತ್ತು. ಈ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಮೂರುವರೆ ವರ್ಷಗಳ ಅವಧಿಯ ಮತ್ತು ಕೇಂದ್ರ ಸರ್ಕಾರದ 9 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು.












Click it and Unblock the Notifications