8 ಕ್ಷೇತ್ರಗಳ ಕಗ್ಗಂಟು ಬಿಡಿಸಲು ದೆಹಲಿಗೆ ಜೋಶಿ!
ಬೆಂಗಳೂರು, ಮಾ.12 : ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕರ್ನಾಟಕ ಬಿಜೆಪಿ ನಾಯಕರ ಕಸರತ್ತು ದೆಹಲಿಗೆ ಶಿಫ್ಟ್ ಆಗಿದೆ. ರಾಜ್ಯ ನಾಯಕರು ಬುಧವಾರ ಸಂಜೆ ದೆಹಲಿಗೆ ತೆರಳಲಿದ್ದು, ಅಲ್ಲಿ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಲಿದ್ದಾರೆ.
ಬುಧವಾರ ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ಆದರೆ, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. [ಬಿಜೆಪಿ ಮೊದಲ ಪಟ್ಟಿ]
ಗುರುವಾರ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ಸಭೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಇತರ ನಾಯಕರು ರಾಷ್ಟ್ರಾಧ್ಯಕ್ಷ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರೊಂದಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಕಗ್ಗಂಟಾಗಿರುವ ಎಂಟು ಕ್ಷೇತ್ರಗಳು

ಬಸವರಾಜುಗೆ ಟಿಕೆಟ್?
ತುಮಕೂರು ಕ್ಷೇತ್ರದಲ್ಲಿ ಯಡಿಯೂರಪ್ಪ ಪರಮಾಪ್ತ ಬಸವರಾಜು ಅವರಿಗೆ ಟಿಕೆಟ್ ನೀಡುವ ಕುರಿತು ಒಮ್ಮತ ಮೂಡಿಲ್ಲ. ಯಡಿಯೂರಪ್ಪ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ, ಬಿಜೆಪಿ ನಾಯಕರ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹಾಲಿ ಸಂಸದರಾಗಿರುವ ಅವರಿಗೆ ಟಿಕೆಟ್ ನೀಡುವ ಬಗ್ಗೆ ದೆಹಲಿಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಶೋಭಾ, ಸಿಟಿ ರವಿ ಜಟಾಪಟಿ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಮಾಜಿ ಸಚಿವ ಹಾಗು ಸ್ಥಳೀಯ ಶಾಸಕ ಸಿ.ಟಿ ರವಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಶೋಭಾ ಅವರಿಗೆ ಸಲಹೆ ನೀಡಲಾಗಿದ್ದು, ಈ ಕುರಿತು ಇನ್ನೂ ಗೊಂದಲ ಮುಂದುವರೆದಿದೆ.

ಅಪ್ಪ-ಮಗನಲ್ಲಿ ಯಾರಿಗೆ ಟಿಕೆಟ್
ಬೀದರ್ ಕ್ಷೇತ್ರದಲ್ಲಿ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಹಾಗೂ ಅವರ ಪುತ್ರ ಸೂರ್ಯಕಾಂತ್ ಇವರಲ್ಲಿ ಯಾರಿಗೆ ಟಿಕೆಟ್ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ನಾಗಮಾರಪಲ್ಲಿ ಮಗನಿಗೆ ಟಿಕೆಟ್ ನೀಡಬೇಕೆಂಬುದು ಯಡಿಯೂರಪ್ಪ ವಾದ. ಆದರೆ, ರಾಜ್ಯ ಬಿಜೆಪಿ ನಾಯಕರು ಗುರುಪಾದಪ್ಪ ನಾಗಮಾರಪಲ್ಲಿ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಬಿಎಸ್ಆರ್ ಕಾಂಗ್ರೆಸ್ ಗೊಂದಲ
ಬಳ್ಳಾರಿ ಕ್ಷೇತ್ರದಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ನ ಅಧ್ಯಕ್ಷ ಬಿ.ಶ್ರೀರಾಮುಲು ಅವರನ್ನು ಪಕ್ಷಕ್ಕೆ ಮರಳುವಂತೆ ಮಾಡಿ, ಅವರಿಗೆ ಟಿಕೆಟ್ ನೀಡಲು ರಾಜ್ಯ ನಾಯಕರು ಚಿಂತಿಸಿದ್ದಾರೆ. ಆದರೆ, ಪಕ್ಷದ ವರಿಷ್ಠರು ಶ್ರೀ ರಾಮುಲು ಬಿಜೆಪಿಗೆ ಮರಳಲು ಒಪ್ಪಿಗೆ ನೀಡಿಲ್ಲ. ಆದ್ದರಿಂದ ಕಗ್ಗಂಟಾಗಿದೆ.

ವೀರಯ್ಯಗೆ ಟಿಕೆಟ್?
ಕೋಲಾರ ಕ್ಷೇತ್ರದಲ್ಲಿ ಮಾಜಿ ಶಾಸಕ ಬೇತಮಂಗಲ ನಾರಾಯಣ ಸ್ವಾಮಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಸಿದ್ಧವಿದ್ದಾರೆ. ಆದರೆ, ವಿಧಾನ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಯಡಿಯೂರಪ್ಪ ಸಹ ವೀರಯ್ಯ ಅವರಿಗೆ ಬೆಂಬಲ ನೀಡಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಹಾಸನದಲ್ಲಿ ಅಭ್ಯರ್ಥಿ ಕೊರತೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿನಿಧಿಸುವ ಹಾಸನ ಕ್ಷೇತ್ರದಲ್ಲಿ ಅವರಿಗೆ ಪೈಪೋಟಿ ನೀಡುವ ಬಿಜೆಪಿ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ. ಕ್ಷೇತ್ರಕ್ಕೆ ನಟಿ ಶೃತಿ ಹೆಸರು ಕೇಳಿಬರುತ್ತಿದ್ದು, ಈ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ ಅಭ್ಯರ್ಥಿ ಆಯ್ಕೆ ದೆಹಲಿಗೆ ಶಿಫ್ಟ್ ಆಗಿದೆ.

ಮಂಡ್ಯ
ಹಾಲಿ ಕಾಂಗ್ರೆಸ್ ವಶದಲ್ಲಿರುವ ಮಂಡ್ಯ ಕ್ಷೇತ್ರದಲ್ಲಿ ನಟಿ ರಮ್ಯಾ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮ ವಾಗಿಲ್ಲ. ಆದ್ದರಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ದೆಹಲಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಮೈಸೂರಿನಲ್ಲಿ ಅಭ್ಯರ್ಥಿ ಯಾರು?
ಮೈಸೂರು ಕ್ಷೇತ್ರದ ಬಿಜೆಪಿ ಹುರಿಯಾಳು ಬಗ್ಗೆಯೂ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸಿಎಚ್ ವಿಜಯಶಂಕರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸಚಿವ ಅಪ್ಪಚ್ಚು ರಂಜನ್ ಸಹ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.












Click it and Unblock the Notifications