Patil Yatnal: ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಕ್ಕೆ ನಿಂತ ಬಿಜೆಪಿ ನಾಯಕರು, ಬಿ.ವೈ ವಿಜಯೇಂದ್ರ ಬಗ್ಗೆ ಹೇಳಿದ್ದೇನು ?
ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇದೀಗ ಬಿಜೆಪಿ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಬಿಜೆಪಿ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಯತ್ನಾಳಗೆ ಬಿಜೆಪಿ ಕೇಂದ್ರ ಸಮಿತಿಯಿಂದ ಶೋಕಾಸ್ ನೋಟಿಸ್ ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ಯತ್ನಾಳಗೆ ಶೋಕಾಸ್ ನೋಟಿಸ್ ಇಂದು ಬಂದಿದಲ್ಲ. ಎರಡು ದಿನಗಳ ಹಿಂದೆಯೇ ಬಂದಿದೆ. ಬಿ.ವೈ ವಿಜಯೇಂದ್ರಗೆ ರಾಜ್ಯಾದ್ಯಕ್ಷ ಸ್ಥಾನ ನಿಭಾಯಿಸಲು ಆಗುವುದಿಲ್ಲ. ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು. ಬಿ.ಎಸ್. ಯಡಿಯೂರಪ್ಪ ಹುಟ್ಟು ಹೋರಾಟಗಾರ ರಾಗಿದ್ದಾರೆ. ಆದರೆ, ವಿಜಯೇಂದ್ರ ಬಿಎಸ್‌ವೈ ಅವರ ಕಾಲಿನ ಧೂಳಿಗೂ ಸಮನಲ್ಲ ಎಂದು ಹೇಳಿದ್ದಾರೆ.

ಜೀನ್ಸ್ ಪ್ಯಾಂಟ್ - ಟೀ ಶರ್ಟ್ ಹಾಕಿ ಅಡ್ಡಾಡುವ ವಯಸ್ಸು ಅವರದ್ದು. ಇನ್ನೊಂದು ನಾಲ್ಕು ವರ್ಷಗಳಾದ ಮೇಲೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ಕೊಡಬೇಕಿತ್ತು. ಈಗ ನಾವು ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ. ಈ ವಿಷಯವಾಗಿ ನಾವು ಕೇಂದ್ರ ನಾಯಕರ ಮನವೊಲಿಸುತ್ತೇವೆ ಎಂದು ಹೇಳಿದ್ದಾರೆ.
ಅವರ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಅವರು ಹಿಂದುಳಿದ ನಾಯಕರಿಗೆ ಬೆದರಿಸುತ್ತಿದ್ದಾರೆ. ವಿಜಯೇಂದ್ರ ಅವರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರು. ಅವರೊಂದಿಗೆ ಲಿಂಗಾಯತ ಹಾಗೂ ಒಕ್ಕಲಿಗರು ಯಾರೂ ಇಲ್ಲ.
ಪಾಪ ರೇಣುಕಾಚಾರ್ಯ ಅವರು ರಾಜಕೀಯ ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಬಿಜೆಪಿಯ ಆತಂರಿಕ ಸಭೆಯಲ್ಲಿ ಕೇಳಲಿ ನಾನು ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ನಾವು ಬಿಜೆಪಿ ನಾಯಕರನ್ನು ಭೇಟಿ ಆಗಲ್ಲ, ದೂರು ಕೊಡೊಕೆ ಹೋಗ್ತಿಲ್ಲ. ವಕ್ಫ ಬೋರ್ಡ್ ವಿರುದ್ಧ ಜೆಪಿಎಸ್ ಕಮಿಟಿ ವರದಿ ಸಲ್ಲಿಕೆ ಮಾಡೊಕೆ ಹೋಗ್ತಿದ್ದೇವೆ. ಬಿಜೆಪಿ ಹೈಕಮಾಂಡ್ ಭೇಟಿ ಆಗಲ್ಲ ಎಂದಿದ್ದಾರೆ. ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ,
ಒಂದೇ ಸಮುದಾಯಕ್ಕೆ ಸೀಮಿತವಾದ ಅಧ್ಯಕ್ಷ ನಮಗೆ ಬೇಡ. ಎಲ್ಲರನ್ನೂ ಸಮಾನವಾಗಿ ಕಾಣೋ ಸಮರ್ಥ ಇದ್ದವರಿಗೆ ಅಧ್ಯಕ್ಷ ಸ್ಥಾನ ಕೊಡಿ ಎಂದಿದ್ದಾರೆ.
ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ವಕ್ಫ್ ಬೋರ್ಡ್ ಭೂ ಕಬಳಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶೋಕಾಸ್ ನೋಟಿಸ್ ನೀಡಿಲ್ಲ ಅನಿಸುತ್ತೆ. ನಾಳೆ ನಾವು ದೆಹಲಿಗೆ ಹೊರಟಿದಿದ್ದೇವೆ. ಮೊದಲು ಜೆಪಿಸಿ ಚೇರ್ಮನ್ ಭೇಟಿ ಆಗ್ತಿವಿ. ಅದಾದ ನಂತರ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮನವೊಲಿಸುತ್ತೇವೆ. ಬಿಜೆಪಿ ಸಂಘಟನೆಯಲ್ಲಿ ಶಾಸಕ ಯತ್ನಾಳ್ ಪಾತ್ರ ಬಹುಮುಖ್ಯ ಇದೆ.
ಈ ಕಾರಣಕ್ಕೆ ನಾವೆಲ್ಲರೂ ಯತ್ನಾಳ್ ಅವರ ಬೆನ್ನಿಗೆ ನಿಲ್ಲುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆ ವಾಕ್ಸಮರ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಯುವುದಕ್ಕೆ ಮುಂದಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು, ನಾನು ಈ ವಿಷಯವನ್ನು ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ಕೊಟ್ಟಿದ್ದೇನೆ. ಆದರೆ, ಅವರು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗುಡುಗಿದ್ದರು.












Click it and Unblock the Notifications