Dharmasthala: ಧರ್ಮಸ್ಥಳದಲ್ಲಿ ಬೀಡುಬಿಟ್ಟ ರಾಜ್ಯ ಬಿಜೆಪಿ ನಾಯಕರು, ಧರ್ಮಾಧಿಕಾರಿ ಭೇಟಿಯಾಗಿ ಹೇಳಿದ್ದೇನು?
ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರೀಮಂಜುನಾಥನ ಸನ್ನಿಧಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರಮುಖ ನಾಯಕರ ಗುಂಪು ಧರ್ಮಸ್ಥಳದಲ್ಲಿ ಬೀಡುಬಿಟ್ಟಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ತನಿಖೆಯ ಭರದಲ್ಲಿ ಧರ್ಮಸ್ಥಳದ ಕುರಿತು ಅಪಪ್ರಚಾರ, ಅವಹೇಳನಗಳು ಮಿತಿಮೀರಿ ನಡೆಯುತ್ತಿವೆ. ಇದರ ಹಿಂದೆ ಷಡ್ಯಂತ್ರವಿದೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತಾದ ಅಪಪ್ರಚಾರಕ್ಕೆ ಕಡಿವಾಣ ಹಾಕದೇ ಇರುವುದು ಕಾಂಗ್ರೆಸ್ ಸರ್ಕಾರದ ಅಪರಾಧ. ಇದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ನಾಡಿನ ಕೋಟ್ಯಂತರ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರದ ವಿರುದ್ಧ ಧರ್ಮಸ್ಥಳದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಬಿಜೆಪಿ ಕಟ್ಟಿಬದ್ಧವಾಗಿ ಧರ್ಮಸ್ಥಳದ ಭಕ್ತರ ದನಿಯಾಗಿ ನಿಲ್ಲಲಿದೆ. ತನಿಖೆಯನ್ನು ಯಾರೂ ವಿರೋಧಿಸಿಲ್ಲ, ಸತ್ಯದ ಬಾಗಿಲು ತೆರೆಯಲಿದೆ, ಧರ್ಮಸ್ಥಳದ ಧರ್ಮದ ಬೆಳಕು ಬೆಳಗಲಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುವ ಷಡ್ಯಂತ್ರಗಳಿಗೆ ಇನ್ನು ಮುಂದೆ ತಕ್ಕ ಉತ್ತರ ಸಿಗಲಿದೆ. ರಾಜ್ಯ ಸರ್ಕಾರ ಧರ್ಮಸ್ಥಳದ ಹೆಸರಿನಲ್ಲಿ ಆಸಕ್ತ ಹಿತಾಸಕ್ತಿಗಳು ಸೃಷ್ಟಿಸಿರುವ ಗೊಂದಲಕ್ಕೆ ಅಂತಿಮ ತೆರೆ ಎಳೆಯುವ ನಿಟ್ಟಿನಲ್ಲಿ ಈವರೆಗಿನ ಎಸ್‌ಐಟಿ ತನಿಖೆಯ ವರದಿ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ತನಿಖೆಗೂ ಮೊದಲೇ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸಿದವರ ಹಿನ್ನೆಲೆಯ ಬಗ್ಗೆಯೂ ತನಿಖೆ ನಡೆಯಬೇಕು. ಈಗಾಗಲೇ ಉಪಮುಖ್ಯಮಂತ್ರಿಗಳು ತನಿಖೆಯ ಹಿಂದೆ ಷಡ್ಯಂತ್ರವಿದೆ ಎಂದಿದ್ದಾರೆ. ಆ ಷಡ್ಯಂತ್ರ ಏನು ಎಂಬುದನ್ನ ಕೂಡ ಬಹಿರಂಗಪಡಿಸಬೇಕು. ಅಪಪ್ರಚಾರದ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಘಾಸಿಯಾಗುವ ರೀತಿ ವರ್ತನೆ ಮಾಡಿದವರ ಮೇಲೆ ಕ್ರಮ ಯಾಕಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ಅಪಪ್ರಚಾರದಿಂದ ಕೋಟ್ಯಂತರ ಭಕ್ತರು, ಧರ್ಮಾಧಿಕಾರಿಗಳು ಸಹ ನೊಂದಿದ್ದಾರೆ. ಕಳಂಕ ಹಚ್ಚುವ ಎಡಪಂಥೀಯರ ಷಡ್ಯಂತ್ರದೊಂದಿಗೆ ಸರ್ಕಾರವೂ ಸೇರಿದೆ ಎಂಬುದು ಭಕ್ತರ ಅನಿಸಿಕೆ. ಕ್ಷೇತ್ರಕ್ಕೆ ಕಳಂಕ ಹಚ್ಚುವವರನ್ನು ನಾವು ಸಹಿಸುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್
ಹಿಂದೂಗಳನ್ನು ಅವಹೇಳನ ಮಾಡುವ ಷಡ್ಯಂತ್ರಗಳು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿವೆ. ಧರ್ಮಸ್ಥಳದ ವಿಚಾರವಾಗಿ ಸಿದ್ದರಾಮಯ್ಯನವರ ಹಿಂದೆ ಟಿಪ್ಪು ಗ್ಯಾಂಗ್ ಇದೆ. ಒಬ್ಬ ಅನಾಮಿಕ ನೀಡಿದ ದೂರನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ನಗರ ನಕ್ಸಲರು, ಅನಾಮಿಕ ಮುಸುಕುಧಾರಿಯಿಂದ ಸರ್ಕಾರವೇ ಈಗ ಮುಸುಕು ಹಾಕಿಸಿಕೊಂಡಿದೆ ಎಂದು ಆರ್.ಅಶೋಕ್ ದೂರಿದ್ದಾರೆ. ಪ್ರತಿ ದಿನ ಸಾವಿರಾರು ದೂರುಗಳು ಬರುತ್ತವೆ. ಈ ಎಲ್ಲದಕ್ಕೂ ಸರ್ಕಾರ ಎಸ್‌ಐಟಿ ರಚಿಸುತ್ತದೆಯೇ? ಹಿಂದೂ ದೇವಸ್ಥಾನದ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಮಸೀದಿ ವಿಷಯದಲ್ಲಿ ಇದೇ ರೀತಿ ನಡೆದುಕೊಳ್ಳುತ್ತದೆಯೇ? ಎಂದು ಕಿಡಿಕಾರಿದ್ದಾರೆ.












Click it and Unblock the Notifications