ಸೌಜನ್ಯ ಹಂತಕರ ಬಗ್ಗೆ ಬಿಜೆಪಿ ನಾಯಕರ ಬಳಿ ಮಾಹಿತಿ ಇದೆ: ಪ್ರಿಯಾಂಕ್ ಖರ್ಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣವು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವುದು ಗೊತ್ತೇ ಇದೆ. ಜಸ್ಟೀಸ್ ಫಾರ್ ಸೌಜನ್ಯ ಅಭಿಯಾನ ಇಂದಿಗೂ ಜೀವಂತವಾಗಿದೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಇಂದಿಗೂ ಹೋರಾಟ ಮುಂದುವರಿದಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಶಾಕಿಂಗ್ ಹೇಳಿಕೆ ನೀಡಿದ್ದು, ಸೌಜನ್ಯ ಹಂತಕರ ಬಗ್ಗೆ ಬಿಜೆಪಿ ನಾಯಕರ ಬಳಿ ಮಾಹಿತಿ ಇದೆ. ಆ ಸತ್ಯವನ್ನ ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ್, ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರಿಗೆ ಸೌಜನ್ಯ ಹತ್ಯೆ ಮಾಡಿದವರು ಯಾರು ಎಂಬ ಮಾಹಿತಿ ಇದೆ ಎಂದು ಸ್ವತಃ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಅವರು 2023ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾಗಿದ್ದ ಕಾಲದಲ್ಲಿ ಹೇಳಿದ್ದರು. ಹಾಗಾಗಿ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಸೌಜನ್ಯ ಹಂತಕರ ಬಗ್ಗೆ ಬಿಜೆಪಿಯವರಿಗೆ ಮಾಹಿತಿ ಇದ್ದರೂ, ಅಂದಿನಿಂದ ಇಂದಿನವರೆಗೂ ಗೌಪ್ಯವಾಗಿ ಇಟ್ಟಿರುವುದೇಕೆ? ಎಂದು ಪ್ರಶ್ನಿಸಿರುವ ಪ್ರಿಯಾಂಕ್, ಈಗಲೂ ಎಸ್‌ಐಟಿ ಮುಂದೆ ಮಾಹಿತಿ ನೀಡಲು ಮುಕ್ತ ಅವಕಾಶವಿದೆ. ಸೌಜನ್ಯ ಹಂತಕರ ಬಗ್ಗೆ ಮಾಹಿತಿ ನೀಡುವ ಬಿಜೆಪಿ ನಾಯಕರಿಗೆ ರಕ್ಷಣೆ ಒದಗಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಭರವಸೆ ನೀಡಿದ್ದಾರೆ. ಬಿಜೆಪಿಯವರು ಸೌಜನ್ಯ ಹತ್ಯೆಗೆ ನ್ಯಾಯ ಒದಗಿಸುವ ತಮ್ಮ ವಾಗ್ದಾನವನ್ನು ನೆನಪು ಮಾಡಿಕೊಳ್ಳಲಿ. ಹಂತಕರ ಬಗ್ಗೆ ತಮಗಿರುವ ಮಾಹಿತಿ ಬಹಿರಂಗಪಡಿಸಿ ತಮ್ಮ ಬದ್ಧತೆಯನ್ನು ನಿರೂಪಿಸಲಿ ಎಂದು ಸವಾಲು ಹಾಕಿದ್ದಾರೆ.
ಸೌಜನ್ಯ ಕೇಸ್‌ನಲ್ಲಿ ತಿರುವು!
ಸೌಜನ್ಯ ಕೇಸ್‌ನಲ್ಲಿ ಪ್ರತ್ಯಕ್ಷ ಸಾಕ್ಷಿ ಎಂದು ಮಹಿಳೆಯೊಬ್ಬರು ಎಸ್‌ಐಟಿಗೆ ದೂರು ನೀಡಿದ್ದು, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆಯು ತಾನೇ ಸಾಕ್ಷಿ ಎಂದು ಮುಂದೆಬಂದಿದ್ದು, ವಿಶೇಷ ತನಿಖಾ ದಳಕ್ಕೆ ದೂರು ನೀಡಿದ್ದಾರೆ. ಚಿಕ್ಕಕೆಂಪಮ್ಮ ಎಂಬುವವರು ಪೋಸ್ಟ್ ಮುಖಾಂತರ ಹಾಗೂ ಮೌಖಿಕವಾಗಿಯೂ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಐಟಿಗೆ ಸೌಜನ್ಯ ಕೇಸ್ ಬಗ್ಗೆ ಮಾಹಿತಿ ನೀಡಿದ್ದು, ದೂರವಾಣಿ ಮೂಲಕವೂ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ದೂರಿನ ಪ್ರಕಾರ ಒಬ್ಬ ಹುಡುಗಿಯನ್ನ ಅಪಹರಣ ಮಾಡುವುದನ್ನ ನಾನು ಕಣ್ಣಾರೆ ನೋಡಿದ್ದೆ. ಧರ್ಮಸ್ಥಳದ ದೇವಸ್ಥಾನಕ್ಕೆ ತೆರಳಿ ಪ್ರಕೃತಿ ಚಿಕಿತ್ಸಾಲಯದ ಕಡೆಗೆ ಹೊರಟಿದ್ದ ವೇಳೆ ಈ ಘಟನೆ ನಡೆಯಿತು. ಒಂದು ಕಾರಿನಲ್ಲಿ ಬಂದು ಹುಡುಗಿಯನ್ನ ಬಲವಂತವಾಗಿ ಕರೆದೊಯ್ದರು. ಅದನ್ನ ನಾನು ನೇರವಾಗಿ ನೋಡಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ ಎಂದು ದೂರುದಾರ ಮಹಿಳೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications