'ಅಂಗನವಾಡಿ ಸಿಬ್ಬಂದಿಗೆ ಸಂಬಳ ಕೊಡಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ..' ಸರ್ಕಾರಕ್ಕೆ ಫುಲ್ ಕ್ಲಾಸ್
ರಾಜ್ಯದಲ್ಲಿ ಅಂಗನವಾಡಿ ಸಿಬ್ಬಂದಿಗೆ ಸರ್ಕಾರ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗರಂ ಆಗಿದ್ದಾರೆ. ಅಂಗನವಾಡಿ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ನೀಡಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ ಎಂದು ಸರ್ಕಾರಕ್ಕೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸುಮಾರು 4 ತಿಂಗಳುಗಳಿಂದ ಅಂಗನವಾಡಿ ಸಿಬ್ಬಂದಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಬಳ ನೀಡಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಅಂಗನವಾಡಿ ಸಹಾಯಕಿಯರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದಕ್ಕೆ ಸರ್ಕಾರವೇ ನೇರ ಹೊಣೆ ಎಂದು ದೂರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ದಿಕ್ಕೆಟ್ಟ ನೀತಿಗಳು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಮರಣಶಾಸನಗಳಾಗಿವೆ. ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲದೆ ಇರುವುದರಿಂದ ಸಹಾಯಕಿಯರು ಸಾವಿನ ಬಾಗಿಲು ಬಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿರುವ ಭ್ರಷ್ಟ ಸಿದ್ದರಾಮಯ್ಯನವರೇ, ಹೊಣೆಗಾರಿಕೆ ಮರೆತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ.. ನೊಂದ ಅಂಗನವಾಡಿ ಸಿಬ್ಬಂದಿಗೆ ಸಕಾಲದಲ್ಲಿ ಸಂಬಳ ನೀಡಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ದಾವಣಗೆರೆ ಜಿಲ್ಲೆಯ ಅಂಗನವಾಡಿ ಸಹಾಯಕಿಯೊಬ್ಬರು ಮೂರು ತಿಂಗಳಿನಿಂದ ವೇತನ ಸಿಗದ ಕಾರಣ ಮನನೊಂದು ಆಸಿಡ್ ಸೇವಿಸಿದ್ದಾರೆ ಎಂದು ವರದಿಯಾಗಿದೆ.
ಅವರ ಸ್ಥೀತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಭಾರತಿ ಎನ್ನುವ ಅಂಗನವಾಡಿ ಸಹಾಯಕಿಯೊಬ್ಬರು 20 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಆಟೋ ಚಾಲಕರಾಗಿದ್ದು, ಐದು ಜನ ಮಕ್ಕಳಿದ್ದಾರೆ.

ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಹೊರೆ, ಹಾಗೂ ಮನೆಯ ನಿರ್ವಹಣೆಗೂ ಕಷ್ಟವಾದ ಕಾರಣ ಇವರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಕಳೆದು ಮೂರ್ನಾಲ್ಕು ತಿಂಗಳಿನಿಂದ ಸರ್ಕಾರ ಸಂಬಳ ನೀಡದ ಕಾರಣ ಇವರ ಬದುಕು ಸಾಗಿಸುವುದೇ ಕಷ್ಟವಾಗಿತ್ತು. ಇದರಿಂದ ಮನನೊಂದು ಇಂತಹ ಕೆಲಸ ಮಾಡಿಕೊಂಡಿದ್ದಾರೆ. ಆಸಿಡ್ ಕುಡಿದಿರುವುದರಿಂದ ಅನ್ನನಾಳ ಬಹುತೇಕ ಸುಟ್ಟು ಹೋಗಿದೆಯಂತೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಯ ಪದಾಧಿಕಾರಿಗಳು ಚಿಟಗೇರಿ ಆಸ್ಪತ್ರೆಗೆ ನೀಡಿ ಭಾರತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ಈ ಘಟನೆ ನಡೆದಿದ್ದು, ಭಾರತಿಯವರ ಚಿಕಿತ್ಸೆಗಾಗಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವರದಿಯನ್ನು ಹಂಚಿಕೊಂಡು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications