ಬಿಪಿಎಲ್ ಕಾರ್ಡ್ ರದ್ದಾದ್ರೆ ಎರಡು ಗ್ಯಾರಂಟಿ ಢಮಾರ್! ಅಶೋಕ್ ಹೇಳಿದ್ದೇನು?
ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮಾನದಂಡಗಳ ನೆಪದಲ್ಲಿ ದಿಢೀರನೆ ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವ ಕರ್ನಾಟಕ ಸರ್ಕಾರದ ನಡೆಯ ಹಿಂದೆ ಬಡವರಿಗೆ ಮೋಸ ಮಾಡುವ ದೊಡ್ಡ ಹುನ್ನಾರವೇ ಅಡಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬಿಪಿಎಲ್ ಕಾರ್ಡು ರದ್ದು ಮಾಡುವ ಮೂಲಕ ಅನ್ನಭಾಗ್ಯದ ಹಣಕ್ಕೆ ಕನ್ನ ಹಾಕುವುದರ ಜೊತೆಗೆ, ಗೃಹಲಕ್ಷ್ಮಿ ಹಣಕ್ಕೂ ಕತ್ತರಿ ಹಾಕಲಿದೆ ಈ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆದ ಸರ್ಕಾರ ಎನ್ನುವುದು ಕೇವಲ ಬಿಟ್ಟಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ನುಡಿಯುವುದು ಒಂದು, ಮಾಡುವುದು ಇನ್ನೊಂದು ಎನ್ನುವುದೇ ಈ ಸರ್ಕಾರದ ನಿಜವಾದ ಅಸಲೀಯತ್ತು ಎಂದು ಹರಿಹಾಯ್ದಿದ್ದಾರೆ.

ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿರುವ ರಾಜ್ಯದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ನಡೆ ಗಮನಿಸಿದರೆ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ದೂರಿದ್ದಾರೆ.
ಮಾನದಂಡಗಳ ನೆಪವೊಡ್ಡಿ ರಾಜ್ಯದ 11 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಅನ್ನಭಾಗ್ಯ ಯೋಜನೆಯ ಜತೆಗೆ ಗೃಹಲಕ್ಷ್ಮಿ ಹಣಕ್ಕೂ ಕತ್ತರಿ ಪ್ರಯೋಗಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಸಾಲು ಸಾಲು ಆಮಿಷಗಳನ್ನೊಡ್ಡಿ ಮತ ಪಡೆದು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುವ ಮುನ್ನವೇ ಉಂಡೂ ಹೋದ ಕೊಂಡೂ ಹೋದ ಎಂಬ ಗಾದೆ ಮಾತನ್ನು ನೆನಪಿಸುವಂತೆ ಲಕ್ಷಾಂತರ ಬಡ ಕುಟುಂಬಗಳನ್ನು ಸಂಕಷ್ಟದ ಸ್ಥಿತಿಗೆ ತಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕಡು ಬಡವರ ಶಾಪ ತಟ್ಟದೇ ಇರಲಾರದು ಎಂದಿದ್ದಾರೆ.
ಸಿಎಂ ಹೇಳಿದ್ದೇನು?
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡಬೇಕು. ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ನೀಡಲಾಗುವುದು. ಅರ್ಹರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಸ್ಪಷ್ಟನೆ ನೀಡಿದ್ದಾರೆ.
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಈ ವಿಚಾರದಲ್ಲಿ ಅಧಿಕಾರಿಗಳ ತಪ್ಪೇನಿಲ್ಲ. ಎಲ್ಲ ಗೊಂದಲಗಳ ಹೊಣೆಯನ್ನು ನಾನೇ ಹೊರುತ್ತೇನೆ. ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಯಾವುದೇ ಅರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications