'14 ಸೈಟಿಗೆ ಸಿದ್ದರಾಮಯ್ಯ 45 ವರ್ಷಗಳ ವ್ಯಕ್ತಿತ್ವ ಹಾಳು..' ಅಯ್ಯೋ ಎಂದ ಬಿಜೆಪಿ ನಾಯಕ
ಮುಡಾ ಕೇಸ್ ವಿಚಾರವಾಗಿ ವಿಪಕ್ಷಗಳಿಗೆ ಅಸ್ತ್ರವಾಗಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಪಹಾಸ್ಯ ಮಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡಿ, ಅವರ ರಾಜಕೀಯ ಜೀವನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಮುಡಾ ವಿಚಾರವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಗಿಳಿಗೆ ಹೇಳಿದಂತೆ ಹೇಳಿದರೂ ಅದನ್ನು ಕೇಳದೆ, ಕೇವಲ 14 ಸೈಟಿಗೆ 45 ವರ್ಷದ ವ್ಯಕಿತ್ವವನ್ನೇ ಕಳೆದುಕೊಂಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇತ್ತೀಚೆಗೂ ಮುಡಾ ಕೇಸ್ ಬಗ್ಗೆ ಮಾತನಾಡಿದ್ದ ಪ್ರತಾಪ್ ಸಿಂಹ, ಯಾವಾಗ ಸಿಎಂ ಸಿದ್ದರಾಮಯ್ಯ ಅವರಿಂದ 62 ಕೋಟಿ ರೂಪಾಯಿ ಕೊಟ್ಟರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎನ್ನುವ ಮಾತು ಅವರ ಬಾಯಿಂದ ಬಂತೋ, ಆಗಲೇ ಅವರ 45 ವರ್ಷದ ರಾಜಕೀಯ ಜೀವನ ಅಂತ್ಯವಾಯಿತು ಎಂದಿದ್ದರು.

ಸಿದ್ದರಾಮಯ್ಯ ಅವರು 14 ಸೈಟ್‌ಗಳನ್ನು ವಾಪಸ್ ಕೊಟ್ಟರೆ, ಈ ಮುಡಾ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತೆ. ಇದರಲ್ಲಿ ಯಾರೆಲ್ಲ ಅಕ್ರಮವಾಗಿ ನಿವೇಶನ ಪಡೆದಿದ್ದಾರೋ ಅವರೆಲ್ಲರ ಹೆಸರೂ ಹೊರಗೆ ಬರುತ್ತದೆ ಎಂದು ಮೊದಲೇ ನಾನು ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದ್ದೆ. ಆದರೆ ಅವರು ಆ ಮಾತು ಕೇಳಿಸಿಕೊಳ್ಳಲಿಲ್ಲ. ಈಗ 62 ಕೋಟಿ ಕೊಟ್ಟರೆ ವಾಪಸ್ ಕೊಡುತ್ತೇನೆ ಎನ್ನುವ ಮಾತಿನ ಮೂಲಕವೇ ಅವರ ರಾಜಕೀಯ ಜೀವನ ಕೊನೆಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದರು.
ಸಿಎಂ ಸಿದ್ದರಾಮಯ್ಯ ಮಾತುಗಳು ಅವರ ಪ್ರಾಮಾಣಿಕತೆಯನ್ನೇ ಸುಳ್ಳು ಮಾಡಿವೆ. ಈಗ ಮುಡಾ ಕೇಸ್‌ಗೆ ಪ್ರತಿಯಾಗಿ ಮತ್ತೊಂದು ಕೇಸ್ ಎಂದೆಲ್ಲ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಸಿದ್ದರಾಮಯ್ಯ ಕುತ್ತಿಗೆಗೆ ಸುತ್ತಿಕೊಂಡಿದೆ. ಅವರ ಸಿಎಂ ಕುರ್ಚಿಯೇ ಹೋಗುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಅವರು ಇತರರ ಮೇಲೆ ದರ್ಪದಿಂದ ಮಾತನಾಡುತ್ತಿದ್ದಾರೆ. ರಾಜ್ಯದ ಜನ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದು, ಸಿಎಂ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಈ ಕೇಸ್‌ನ ತನಿಖೆಗೆ ಸಹಕರಿಸುವುದು ಒಳ್ಳೆಯದು ಎಂದಿದ್ದರು.

ಕಳೆದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ, ಬಿಟ್ ಕಾಯಿನ್, 40 ಪರ್ಸೆಂಟ್ ಅಂತೆಲ್ಲ ಸಿದ್ದರಾಮಯ್ಯ ಅವರೇ ಏನೇನೋ ಅಭಿಯಾನ ಮಾಡಿದ್ರು. ಆದ್ರೆ ಒಂದು ವರ್ಷ ಕಳೆದರೂ ಅವರಿಗೆ ಈ ಆರೋಪಗಳಲ್ಲಿ ಒಂದು ಸಣ್ಣ ಸಾಕ್ಷಿ ಹುಡುಕಲು ಆಗಲಿಲ್ಲ. ಈಗ ಅವರ ಮೇಲೆ ಕೇಸ್ ದಾಖಲಾಗಿದ್ದಕ್ಕೆ, ಸೇಡಿನ ರಾಜಕಾರಣ ಮಾಡಲು ಬೇರೆಯವರ ಮೇಲೆ ಕೇಸ್ ಹಾಕಿಸುತ್ತಿದ್ದಾರೆ.
ಯಾರ ಮೇಲೆಲ್ಲ ಕೇಸ್ ಹಾಕುತ್ತಾರೋ ಹಾಕಲಿ, ನಾವು ಅದನ್ನು ಎದುರಿಸಲು ಸಿದ್ಧ ಎಂದು ಸವಾಲ್ ಹಾಕಿದ್ದರು. ರಾಜ್ಯದ ಜನರು ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದೇ ಇಲ್ಲಿವರೆಗೂ ನಂಬಿದ್ದರು. ಆದರೆ ಅವರ ಪ್ರಾಮಾಣಿಕತೆ ಅವರ ಬಾಯಿಂದಲೇ ಸುಳ್ಳಾಗಿದ್ದು ವಿಪರ್ಯಾಸ ಎಂದು ಪ್ರತಾಪ್ ಸಿಂಹ ಹೇಳಿದ್ದರು.












Click it and Unblock the Notifications