ಕಾಂಗ್ರೆಸ್‌ಗೆ 'ದೇಶದ್ರೋಹಿ ಸರ್ಕಾರ'ದ ಪಟ್ಟ ಕೊಟ್ಟ ಬಿಜೆಪಿ ನಾಯಕ
ರಾಜ್ಯದಲ್ಲಿರುವ ಭಯೋತ್ಪಾದಕರ ಸರ್ಕಾರ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳ ಆಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಷನಂತೆ ಮರ್ಧನ ಆಗುತ್ತದೆ. ವಿಜಯದಶಮಿ ದಿನವೇ ಕಾಂಗ್ರೆಸ್ ಹಿಂದೂಗಳ ಭಾವನೆಗಳನ್ನು ಕೆರಳಿಸಿದೆ. ಈ ಹಿಂದೆ ಪಿಎಫ್‌ಐ ಸಂಘಟನೆಗಳ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದಿದ್ದರು. ಇದರಿಂದಲೇ ರಾಜ್ಯದಲ್ಲಿಂದು ಭಯೋತ್ಪಾದನೆ ಮಿತಿಮೀರಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕೇಸ್ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸುವ ವಿಚಾರವಾಗಿಯೂ ರೇಣುಕಾಚಾರ್ಯ ಮಾತನಾಡಿದ್ದಾರೆ. ಮೂರು ವರ್ಷಗಳ ಹಿಂದೆ ಪೊಲೀಸ್ ಠಾಣೆಗಳನ್ನೇ ಸುಟ್ಟು ಹಾಕಲು ಮುಂದಾಗಿದ್ದರು. ಕಲ್ಲುತೂರಾಟ ನಡೆದಿತ್ತು. ಈ ವೇಳೆ ಕಿಡಿಗೇಡಿಗಳು ಮಾರಕಾಸ್ತ್ರಗಳನ್ನು ಹಿಡಿದಿದ್ದರು. ಪೊಲೀಸರ ಮೇಲೂ ಹಲ್ಲೆ ಮಾಡಿದ್ದರು. ಇದರಲ್ಲಿ ಸುಮಾರು ನೂರಾರು ಜನರ ಮೇಲೆ ಕೇಸ್ ದಾಖಲಿಸಲಾಗಿತ್ತು. ಅದನ್ನು ಈಗ ಸರ್ಕಾರ ವಾಪಸ್ ಪಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಲ್ವಾ? ಎಂದು ಗುಡುಗಿದ್ದಾರೆ.
ನಾಡು, ನುಡಿ, ನೆಲ-ಜಲದ ವಿಚಾರದಲ್ಲಿ ಹೋರಾಟ ಮಾಡಿದ ಹಲವರ ಮೇಲೆ ಕೇಸ್ ಹಾಕಲಾಗಿದೆ. ತಾಕತ್ತಿದ್ರೆ ಅವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೀರಿ. ದೇಶವಿರೋಧಿಗಳ ಮೇಲೆ ಹಾಕಿದ್ದ ಕೇಸ್ ವಾಪಸ್ ಪಡೆದರೆ ಮತ್ತಷ್ಟು ಮೆರೆಯುತ್ತಾರೆ. ರಾಜ್ಯದ ಜನರು ಸಿದ್ದರಾಮಯ್ಯ ಅವರಿಗೆ ಅವಕಾಶ ಕೊಟ್ಟಿದ್ದು, ಭಯೋತ್ಪಾದಕರನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಹಳೇ ಹುಬ್ಬಳ್ಳಿಯ ಗಲಾಟೆ ಪ್ರಕರಣದಲ್ಲಿ 16 C 18,20 ರ ಅಡಿ NIA ಚಾರ್ಜ್ ಶೀಟ್ ಫೈಲ್ ಆಗಿತ್ತು. ಆದರೆ ಈಗ ಇದನ್ನ ರಾಜ್ಯ ಸರ್ಕಾರ ತೆಗೆದು ಹಾಕಿದ್ದು ಇದೊಂದು ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಸಮಾಜದ ಹಿತದೃಷ್ಟಿ ಇದ್ದಿದ್ದರೆ, ಕೇಸ್ ವಾಪಸ್ ಪಡೆಯೋಕೆ ಸಾಧ್ಯ ಇಲ್ಲ. ಆದರೆ ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ ಆಗಿದ್ದು ಕೇಸ್ ವಾಪಸ್ ಪಡೆದು ಬಹುದೊಡ್ಡ ತಪ್ಪು ಮಾಡಿದೆ ಎಂದು ದೂರಿದ್ದಾರೆ.

ಇಂತಹವರ ಮೇಲಿನ ಕೇಸ್‌ಗಳನ್ನೇ ವಾಪಸ್ ಪಡೆಯುತ್ತಾರೆ ಅಂದ್ರೆ, ಅವರ ಉದ್ದೇಶ ಏನು? ದೇಶದಲ್ಲಿ ಶೇ 95ರಷ್ಟು ನಕ್ಸಲ್ ಚಟುವಟಿಕೆ ಕಡಿಮೆ ಆಗಿದ್ದು ಬಿಜೆಪಿ ಸರ್ಕಾರದ ಬಿಗಿಯಾದ ಕ್ರಮದಿಂದ ಮಾತ್ರ. ಆದರೆ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ಕೇಸ್ ವಾಪಸ್ ಪಡೆಯುತ್ತಿರೋದನ್ನ ನಾನು ಖಂಡಿಸುತ್ತೇನೆ. ಕಾಂಗ್ರೆಸ್‌ನವರು ಭಯೋತ್ಪಾದಕ ಇಸ್ಲಾಂ ಪರ ಇದ್ದು, ಜನತೆಯ ಸುರಕ್ಷತೆಯ ಆತಂಕ ಎದುರಾಗಿದೆ. ಇದು ಕಾಂಗ್ರೆಸ್ ಅಥವಾ ಬಿಜೆಪಿ ಅನ್ನೋ ಪ್ರಶ್ನೆ ಅಲ್ಲ. ಈ ಎಲ್ಲ ಬೆಳವಣಿಗೆ ನೋಡುತ್ತಿದ್ರೆ ಮತಾಂಧತೆಯ ಯಾವ ರೀತಿ ತಲೆಗೆ ಹತ್ತಿದೆ ಅನ್ನೋದು ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಗಲಭೆ ಕೇಸ್ ಅನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ವಿಚಾರವಾಗಿ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಬಹುತೇಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications