Dalit CM: ತಾಕತ್ತಿದ್ರೆ ಕರ್ನಾಟಕಕ್ಕೆ ದಲಿತ ಸಿಎಂ ಮಾಡಿ: ಖರ್ಗೆಗೆ ಹಿರಿಯ ರಾಜಕಾರಣಿ ಸವಾಲು
ರಾಜ್ಯ ಸಿಎಂ ಬದಲಾವಣೆ ವಿಚಾರ ಒಂದೆಡೆಯಾದರೆ, ದಲಿತ ಸಿಎಂ ಕೂಗು ಕೂಡ ಜೋರಾಗಿ ಮೊಳಗುತ್ತಿದೆ. ಇತ್ತ ಡಿಕೆ ಶಿವಕುಮಾರ್ ಅವರು ಮುಂದಿನ ಸಿಎಂ ಎಂಬ ಭವಿಷ್ಯವಾಣಿಗಳು ಕೇಳಿಬರುತ್ತಿವೆ. ಮತ್ತೊಂದೆಡೆ ದಲಿತ ನಾಯಕರು ಕೂಡ ಸಿಎಂ ಸ್ಥಾನಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಈಗಲೂ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ದಲಿತ ಸಿಎಂ ಮಾಡುವ ವಿಚಾರವಾಗಿ ರಾಜಕಾರಣಿಯೊಬ್ಬರು ಸವಾಲು ಹಾಕಿದ್ದಾರೆ. ಅದು ಯಾರು ಗೊತ್ತಾ?
ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರು ಪ್ರತ್ಯೇಕವಾಗಿ ತಮ್ಮ ಬಲ ಪ್ರದರ್ಶಿಸಲು ಮುಂದಾಗಿದ್ದರು. ದಲಿತ ಸಮುದಾಯದ ನಾಯಕರಾಗಿ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ದಲಿತ ನಾಯಕರು ಭೇಟಿಯಾಗಿ ಮಹತ್ವದ ಚರ್ಚೆಯೂ ನಡೆಸಿದ್ರು. ದಲಿತ ಸಮುದಾಯ ನಾಯಕರಿಗೆ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡದಂತೆ ಹೈಕಮಾಂಡ್ ಎಲ್ಲರ ಬಾಯಿಗೆ ಬೀಗ ಜಡಿದಿದೆ. ಈಗ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರು ದಲಿತ ಸಿಎಂಗಾಗಿ ಧ್ವನಿ ಎತ್ತಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರೇ, ನಿಮಗೆ ವಯಸ್ಸಾಗಿದೆ. ನಿಮ್ಮ ಅಧ್ಯಕ್ಷ ಸ್ಥಾನ ಮುಗಿಯುವ ವೇಳೆಗೆ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೇಕೆ? ಮುಳುಗುವ ಹಡಗಾಗಿರುವ ಕಾಂಗ್ರೆಸ್‌ಗೆ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸರ್ವಾಧಿಕಾರಿಗಳಿದ್ದಂತೆ. ನಿಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಕೊಡುತ್ತೇನೆ ಎಂದು ಹೇಳಿದ್ರಿ. ಆದರೆ ದಲಿತರು ಮೇಲೆ ಬರುವುದು ಇಲ್ಲಿರುವವರಿಗೆ ಬೇಕಾಗಿಲ್ಲ. ಖರ್ಗೆ ಅವರೇ ನಿಮಗೆ ತಾಕತ್ತಿದ್ದರೆ ರಾಜ್ಯದಲ್ಲಿ ದಲಿತ ಸಿಎಂ ಮಾಡಿ ತೋರಿಸಿ. ನಿಮಗೂ ವಯಸ್ಸಾಗಿದೆ, ಹಾಗಾಗಿ ಅಧ್ಯಕ್ಷರಾಗಿ ಅಧಿಕಾರವಧಿ ಮುಗಿಯುವಷ್ಟರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಸವಾಲ್ ಹಾಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಒಂದೂ ಅಭಿವೃದ್ಧಿ ಕೆಲಸಗಳಾಗಿಲ್ಲ. ದಿನಗೂಲಿ ಕೆಲಸ ಮಾಡುವವರೂ ಸೇರಿದಂತೆ ಯಾರಿಗೂ ಸಂಬಳ ಬಂದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇಲ್ಲಿಯವರೆಗೂ 35 ಸಾವಿರ ಕೋಟಿ ರೂಪಾಯಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಗೋವಿಂದ ಕಾರಜೋಳ ದೂರಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರ ದಲಿತ ಸಮುದಾಯಕ್ಕೆ ದೊಡ್ಡ ಮೋಸ ಮಾಡುತ್ತಿದೆ. ಸಿದ್ದರಾಮಯ್ಯನವರು ಹೇಳುವ ಸಾಮಾಜಿಕ ನ್ಯಾಯ ಇದೇನಾ? ಸುಮಾರು 7 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸುತ್ತೀರಿ. ನೀವು ನಮ್ಮ ಜಿಲ್ಲೆಗೆ 60 ಸಾವಿರ ಕೋಟಿ ರೂಪಾಯಿ ಅನುದಾನ ಕೊಡಬೇಕು. ಅಹಿಂದ ನಾಯಕರಿಂದ ರಾಜ್ಯದಲ್ಲಿ ಮಹಾಮೋಸವಾಗುತ್ತಿದೆ. ದಲಿತ ಸಚಿವರಿಗೂ ಮಾನ,ಮರ್ಯಾದೆ ಅನ್ನೋದು ಇಲ್ಲ. ಅವರೆಲ್ಲ ರಾಜೀನಾಮೆ ಕೊಟ್ಟು ಬರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications