C.N.Ashwath Narayan: ಶಾಸಕ ಅಶ್ವಥ್ ನಾರಾಯಣ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ?
ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿ ಉಳಿದಿರುವ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವು ಇದೀಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇಲ್ಲಿವರೆಗೆ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮಾತ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜೋರಾಗಿ ಕೇಳಿಬರುತ್ತಿತ್ತು. ಇದೀಗ ಮತ್ತೊಬ್ಬ ಪ್ರಭಾವಿ ನಾಯಕನ ಹೆಸರು ಕೂಡ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದೆ.
ಸದ್ಯ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಹಾಗೂ ಮಾಜಿ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ್ ಅವರ ಹೆಸರು ಕೇಳಿಬಂದಿದೆ. ಅಶ್ವಥ್ ನಾರಾಯಣ್ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಿಜೆಪಿ ನಾಯಕ ಶ್ರೀರಾಮುಲು ಬಹಿರಂಗಪಡಿಸಿದ್ದಾರೆ.

ಸದ್ಯ ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿರುವ ಸಿ.ಎನ್.ಅಶ್ವಥ್ ನಾರಾಯಣ್ ಅವರು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಬೆಂಗಳೂರು ಭಾಗದ ಬಿಜೆಪಿ ನಾಯಕರ ಪೈಕಿ ಅಶ್ವಥ್ ನಾರಾಯಣ್ ಅವರು ಕೂಡ ಪ್ರಭಾವಿ ಎನ್ನಲಾಗಿದೆ. ಈ ಹಿನ್ನೆಲೆ ಮೊದಲಿನಿಂದಲೂ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇವರೂ ಇದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸಂಸದ ಬಿ.ಶ್ರೀರಾಮುಲು ಅವರು ಸದ್ಯ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ. ನಿನ್ನೆ ಗದಗ ಜಿಲ್ಲೆಯಲ್ಲಿ ಮಾತನಾಡಿರುವ ಶ್ರೀರಾಮುಲು, ಸದ್ಯ ಯಾರಿಗೆ ಯಾವ ಸ್ಥಾನ ಎನ್ನುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಭಾಗದಲ್ಲಿ ನೋಡುವುದಾದರೆ ಸಿಎನ್ ಅಶ್ವಥ್ ನಾರಾಯಣ್ ಅವರಿಗೆ ಪಾರ್ಟಿ ಅಧ್ಯಕ್ಷರಾಗಬೇಕು ಎಂಬ ಆಸೆ ಮನಸ್ಸಿನಲ್ಲಿರಬಹುದು. ಬೆಳಗಾವಿ ಭಾಗದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ, ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನನಗೆ ಅಧ್ಯಕ್ಷರಾಗಬೇಕು ಎನ್ನುವ ಆಸೆ ಇರಬಹುದು ಎಂದು ಹೇಳಿದ್ದಾರೆ.
ನನ್ನ ಮನಸ್ಸಿನಲ್ಲಿ ಏನಾದರೂ ಇರಬಹುದು. ಆದರೆ, ಹೈಮಾಂಡ್ ಹಾಗೂ ರಾಷ್ಟ್ರ ನಾಯಕರು ಇದಕ್ಕೆಲ್ಲ ಮೂಗುದಾರ. ತಮ್ಮ ಮನಸ್ಸಿನಲ್ಲಿರುವ ಆಸೆಗಳನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಡಾ.ಕೆ.ಸುಧಾಕರ್ ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಅವರೂ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ನಾನು ಕೂಡ ನನ್ನ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.

ನಿಜವಾಗಿಯೂ ಹೈಕಮಾಂಡ್ ಹೇಳಿದ್ದರೆ ಬಿ.ವೈ.ವಿಜಯೇಂದ್ರ ಅವರೇ ಮತ್ತೆ ರಾಜ್ಯಾಧ್ಯಕ್ಷರಾಗಲಿ. ಹೈಕಮಾಂಡ್ ಹೇಳಿದ ಮೇಲೆ ಅದಕ್ಕೆ ಎದುರು ಯಾರು ಮಾತನಾಡುತ್ತಾರೆ? ಎರಡಲ್ಲ ಬೇಕಾದರೆ ಅವರು ಇನ್ನೂ ಐದು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಲಿ. ಇದನ್ನ ಯಾರು ಬೇಡ ಅಂತಾರೆ? ಎಂದಿದ್ದಾರೆ. ಹಿರಿಯ ನಾಯಕರು ಏನು ಹೇಳುತ್ತಾರೋ ಅದನ್ನು ಇಡೀ ದೇಶ ಹಾಗೂ ರಾಜ್ಯ ಕೇಳುತ್ತದೆ. ಹೀಗಿರುವಾಗ ನಾವು ಮಾತನಾಡುವುದರಲ್ಲಿ ಅರ್ಥವೇನಿದೆ? ಹೈಕಮಾಂಡ್ ನಾಯಕರು ಯಾರಿಗೆ ಮೂಗುದಾರ ಹಾಕಬೇಕೋ ಹಾಕ್ತಾರೆ ಎಂದೂ ಶ್ರೀರಾಮುಲು ಹೇಳಿದ್ದಾರೆ. ವಿಜಯೇಂದ್ರ, ಯತ್ನಾಳ್ ಜೊತೆಗೆ ಇದೀಗ ಅಶ್ವಥ್ ನಾರಾಯಣ್ ಅವರ ಹೆಸರು ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವುದು ಸಂಚಲನ ಸೃಷ್ಟಿಸಿದೆ.












Click it and Unblock the Notifications