Breaking; ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ಟ್ವೀಟ್ ಮಾಡಿದ ಬಿಜೆಪಿ
ಬೆಂಗಳೂರು, ಏಪ್ರಿಲ್ 26; ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ.
ಮಂಗಳವಾರ ಕರ್ನಾಟಕ ಬಿಜೆಪಿ ದಿವ್ಯಾ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಇರುವ ಫೋಟೋಗಳನ್ನು ಟ್ವೀಟ್ ಮಾಡಿದೆ. 'ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಕಾಂಗ್ರೆಸ್ ಆಪಾದಿಸಿತ್ತು. ಆದರೆ ಈ ಚಿತ್ರ ಬೇರೆ ಏನನ್ನೋ ಹೇಳುತ್ತಿದೆ' ಎಂದು ಟ್ವೀಟ್‌ನಲ್ಲಿ ಹೇಳಿದೆ.
'ಕಾಂಗ್ರೆಸ್ ಅಧ್ಯಕ್ಷರು ಎಷ್ಟು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ ನೋಡಿ. ಕಾಂಗ್ರೆಸ್ ಪಕ್ಷದ ಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ಪ್ರಿಯಾಂಕ್ ಖರ್ಗೆ ವಿವರಿಸಬಹುದೇ?. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಅವರು ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರ್ಯಕ್ಕೂ ಈಗ ದಾಖಲೆ ಲಭಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡ' ಎಂದು ಆರೋಪಿಸಿದೆ.

'ಪಿಎಸ್ಐ ನೇಮಕ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ ಅವರು ಈ ಮಹತ್ವದ ದಾಖಲೆಯನ್ನು ಮುಚ್ಚಿಟ್ಟಿದ್ದೇಕೆ?. ಕಾಂಗ್ರೆಸ್ ಪಕ್ಷದ ನಾಯಕರ ಹುಳುಕು ಬಯಲಾಗುತ್ತದೆ ಎಂಬ ಭಯವೇ?. ಇದೇ ಕಾರಣಕ್ಕಾಗಿ ಪ್ರಿಯಾಂಕ್ ಖರ್ಗೆ ಅವರು ಸಿಐಡಿ ವಿಚಾರಣೆ ತಪ್ಪಿಸಿಕೊಂಡಿದ್ದೇ?. ಅಥವಾ ಹಗರಣದಲ್ಲಿ ಖರ್ಗೆ ಕುಟುಂಬದ ಪಾಲೂ ಇದೆಯೇ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
'ಪ್ರಿಯಾಂಕ ಖರ್ಗೆ ಅವರ ಜೊತೆ ನಾವಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇಕೆ ಎಂದು ಈಗ ಬಯಲಾಗುತ್ತಿದೆ. ಹಗರಣದ ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ ಎಲ್ಲವೂ ಕೆಪಿಸಿಸಿ ಕಚೇರಿಯಲ್ಲೇ ಸಿದ್ಧವಾಗಿದ್ದೇ?' ಎಂದು ಪ್ರತಿಪಕ್ಷಕ್ಕೆ ಬಿಜೆಪಿ ಟ್ವೀಟ್ ಬಾಣ ಬಿಟ್ಟಿದೆ.
ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ.
— BJP Karnataka (@BJP4Karnataka) April 26, 2022
ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!#CONgressPSIToolkit pic.twitter.com/84G874HCPy
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯ ಅಧ್ಯಕ್ಷೆ. ಇದೇ ಶಾಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದರಲ್ಲಿ ಅಕ್ರಮ ನಡೆದಿತ್ತು. ದಿವ್ಯಾ ಹಾಗರಗಿ ಪತಿಯನ್ನು ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.












Click it and Unblock the Notifications