ಕರ್ನಾಟಕ ಬಿಜೆಪಿ ವಿಶೇಷ ರಾಜ್ಯ ಕಾರ್ಯಕಾರಣಿ ದಿನಾಂಕ ಬದಲು!
ಬೆಂಗಳೂರು, ಜನವರಿ 15: ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯ ದಿನಾಂಕ ಬದಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯ ಕುರಿತು ಚರ್ಚೆ ನಡೆಸಲು ಈ ವಿಶೇಷ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿತ್ತು.
ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 18ರಂದು ನಿಗದಿಯಾಗಿದ್ದ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯು ಕಾರಣಾಂತರಗಳಿಂದ ಜನವರಿ 19ರ ಶುಕ್ರವಾರ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಸಭೆಗೆ ಪೂರ್ವಭಾವಿಯಾಗಿ ಸೋಮವಾರ ಸಭೆಯನ್ನು ನಡೆಸಲಾಗಿದೆ. ಮುಂಬರುವ ಲೋಕ ಸಮರದಲ್ಲಿ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸುವ ನಿಟ್ಟಿನಲ್ಲಿ ಸಂಘಟನಾತ್ಮಕ ಕಾರ್ಯತಂತ್ರಗಳನ್ನು ರೂಪಿಸಲು ಸಭೆ ನಿಗದಿಯಾಗಿದ್ದು, ಸಭೆಯನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಪ್ರೀತಮ್ ಗೌಡ, ಪಿ. ರಾಜೀವ್, ಶಾಸಕರಾದ ಎಸ್. ಆರ್. ವಿಶ್ವನಾಥ್, ರಾಜ್ಯ ಖಜಾಂಚಿ ಸುಬ್ಬನರಸಿಂಹ, ಬೆಂಗಳೂರಿನ ನೂತನ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಮಿತ್ ಶಾ ಆಗಮನ; ಲೋಕಸಭೆ ಚುನಾವಣೆ ತಯಾರಿ ಆರಂಭಿಸಿರುವ ಕೇಂದ್ರದ ಬಿಜೆಪಿ ನಾಯಕರು ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ, ಪಕ್ಷದ ಹಿರಿಯ ನಾಯಕ ಅಮಿತ್ ಶಾ ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಲೋಕಸಭೆ ಚುನಾವಣೆಗೆ ನಾಲ್ಕು ಕ್ಲಸ್ಟರ್‌ಗಳನ್ನು ಕೇಂದ್ರ ಬಿಜೆಪಿ ಘಟಕ ರಚನೆ ಮಾಡಿದೆ. ಒಂದು ಘಟಕಕ್ಕೆ ಪ್ರಧಾನಿ ಮೋದಿ, ಮತ್ತೊಂದಕ್ಕೆ ಅಮಿತ್ ಶಾ, ಜೆ. ಪಿ. ನಡ್ಡಾ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಒದೊಂದು ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಲ್ಲದೇ ಬಿಜೆಪಿ ಹೊಸದಾಗಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದೆ. ಇಂತಹ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಕಾರ್ಯತಂತ್ರವನ್ನು ರೂಪಿಸಲು ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಜೆಡಿಎಸ್, ಕಾಂಗ್ರೆಸ್ ತಲಾ ಒಂದು ಸ್ಥಾನ ಗೆದ್ದಿದ್ದವು. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದರು.
2023ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರ ಪಡೆದಿದೆ. ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ. ಚುನಾವಣೆಗೆ ಹೋಗುವ ಮೊದಲು ಬಿಜೆಪಿ ಜೆಡಿಎಸ್ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ.
ಕಳೆದ ಚುನಾವಣೆಯಷ್ಟು ಸರಳವಾಗಿ ರಾಜ್ಯದಲ್ಲಿ ಈ ಬಾರಿ ಗೆಲ್ಲಲಾಗದು ಎಂಬುದು ಬಿಜೆಪಿ ನಾಯಕರಿಗೂ ತಿಳಿದಿದೆ. ಆದ್ದರಿಂದ ಚುನಾವಣಾ ತಂತ್ರವನ್ನು ರೂಪಿಸುತ್ತಿದ್ದಾರೆ. 20+ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಉಭಯ ಪಕ್ಷಗಳ ಗುರಿ.
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾನುವಾರ ಬಿ. ವೈ. ವಿಜಯೇಂದ್ರ ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ನಿಯುಕ್ತಿಗೊಂಡಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ವಿವಿಧ ಘಟಕಗಳಿಗೆ ನಿಯುಕ್ತಿಗೊಂಡಿರುವ ನೂತನ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ಲೋಕಸಮರದಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿ, ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಶ್ರಮಿಸುತ್ತೀರೆಂದು ನಂಬಿದ್ದೇನೆ. ನಿಮ್ಮ ಸಂಘಟನೆಯ ಹಾದಿ ಸುಗಮವಾಗಿ ಸಾಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications