ಪ್ರಯೋಗ, ಫಲಿತಾಂಶ ಯಶಸ್ವಿ: ಜೆಡಿಎಸ್-ಬಿಜೆಪಿ ಮೈತ್ರಿ ಮತ್ತಷ್ಟು ಗಟ್ಟಿ
ಬೆಂಗಳೂರು, ಜೂನ್ 17: ಕರ್ನಾಟಕದ ರಾಜಕೀಯ ಚಿತ್ರಣದಲ್ಲಿ ಕೆಲವು ಬದಲಾವಣೆಯಾಗಿದೆ. 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕಾಂಗ್ರೆಸ್ ವಿರುದ್ಧದ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರ ಗೆಲ್ಲುವ ಮೂಲಕ ಬಿಜೆಪಿಗೆ ಮುಖಭಂಗ ಉಂಟು ಮಾಡಿತು. ಅಧಿಕಾರದಲ್ಲಿದ್ದ ಪಕ್ಷವಾದ ಬಿಜೆಪಿ ಕೇವಲ 66 ಸ್ಥಾನಗಳಲ್ಲಿ ಗೆಲುವು ಕಂಡಿತು. ಜೆಡಿಎಸ್ 19 ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಯಿತು. ಆದರೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯ ಬದಲಾಯಿತು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆ 2024 ಗಮನದಲ್ಲಿಟ್ಟುಕೊಂಡು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದರು. ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದರು. ಬಿಜೆಪಿ-ಜೆಡಿಎಸ್ ಮೈತ್ರಿಯ ಪ್ರಯೋಗದ ಬಗ್ಗೆ ಅನೇಕರಿಗೆ ಆತಂಕವಿತ್ತು.
ಮೈತ್ರಿ ಯಶಸ್ವಿ: ವಿಧಾನ ಪರಿಷತ್ ಚುನಾವಣೆ, ಲೋಕಸಭೆ ಚುನಾವಣೆ 2024ರಲ್ಲಿ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ, ಮೈತ್ರಿ ಫಲ ನೀಡಿದೆ. ಇದರಿಂದಾಗಿ ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಮೈತ್ರಿ ಮುಂದುವರೆಯುವ ಸೂಚನೆ ಸಿಕ್ಕಿದೆ.
ಲೋಕಸಭೆ ಚುನಾವಣೆ 2024ರ ಫಲಿತಾಂಶ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಶಕ್ತಿ ತುಂಬಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಕ್ಕಲಿಗ ಮತಗಳು ಬಂದಿದ್ದು, ಜೆಡಿಎಸ್ ಬಿಜೆಪಿ ಹೊಂದಾಣಿಕೆ ಫಲ ನೀಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಂಡ್ಯದಿಂದ ಚುನಾವಣೆಗೆ ಗೆದ್ದ ಎಚ್. ಡಿ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ 3.0 ಸಂಪುಟವನ್ನು ಸೇರಿದ್ದು, ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಜೆಡಿಎಸ್, ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಲೋಕಸಭಾ ಕ್ಷೇತ್ರ. ತುಮಕೂರು ಲೋಕಸಭಾ ಕ್ಷೇತ್ರ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಗೆಲುವು ಎಲ್ಲದರಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಯ ಲೆಕ್ಕಾಚಾರ ಅಡಗಿದೆ ಎಂಬುದನ್ನು ಬಿಜೆಪಿ ನಾಯಕರು ಸಹ ಒಪ್ಪಿದ್ದಾರೆ.
ಬಿಬಿಎಂಪಿ ಚುನಾವಣೆ ಕಾಂಗ್ರೆಸ್-ಬಿಜೆಪಿ & ಜೆಡಿಎಸ್ ಮೈತ್ರಿಕೂಟಕ್ಕೆ ಪ್ರತಿಷ್ಠೆಯಾಗಿದೆ. ಬೆಂಗಳೂರಿನ ಮೇಲೆ ಹಿಡಿತಹೊಂದಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ ಬಿಜೆಪಿ ಅಧಿಕಾರ ಹಿಡಿಯಲೇಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ವಿರೋಧಿಯಾದ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲಿದೆ.
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ ಮೂರು ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾದ ಬಳಿಕ ನಡೆಯುವ ಮೊದಲ ಚುನಾವಣೆಯಲ್ಲಿ ಗೆಲುವು ಸಿಗಬೇಕು ಎಂದು ಚುನಾವಣಾ ತಯಾರಿ ಆರಂಭಿಸಿದೆ.
ಬಿಬಿಎಂಪಿ ಚುನಾವಣೆ ಗೆಲ್ಲುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ. ಕೆ. ಶಿವಕುಮಾರ್‌ಗೆ ಹಿನ್ನಡೆ ಉಂಟು ಮಾಡುವುದು ಬಿಜೆಪಿ, ಜೆಡಿಎಸ್ ತಂತ್ರವಾಗಿದೆ. ಸುಮಾರು 4 ವರ್ಷಗಳಿಂದ ಬಿಬಿಎಂಪಿ ಚುನಾವಣೆಯೇ ನಡೆದಿಲ್ಲ. ಆದ್ದರಿಂದ ಈಗ ನಡೆಯುವ ಚುನಾವಣೆ ಗೆದ್ದು, ಬೆಂಗಳೂರು ನಗರದ ಆಡಳಿತ ಹಿಡಿಯಬೇಕು ಎಂಬುದು ಬಿಜೆಪಿ ಗುರಿ, ಇದಕ್ಕೆ ಜೆಡಿಎಸ್ ಬೆಂಬಲವಾಗಿ ನಿಂತಿದೆ.
ಬೆಂಗಳೂರು ನಗರ, ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಸಂಸದರು ಬಿಜೆಪಿ-ಜೆಡಿಎಸ್ ಮೈತ್ರಿ ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈತ್ರಿ ಮುರಿಯುವ ಮಾತುಗಳನ್ನು ಉಭಯ ಪಕ್ಷಗಳ ಯಾವ ನಾಯಕರು ಸಹ ಆಡಿಲ್ಲ. ಈ ಬಿಗಿಯಾದ ಮೈತ್ರಿ ಕಾಂಗ್ರೆಸ್‌ಗೆ ಆತಂಕವನ್ನು ತಂದಿದೆ.












Click it and Unblock the Notifications