ಡಿಕೆಶಿ ಎದುರು ಮೈತ್ರಿಕೂಟಕ್ಕೆ 2ನೇ ಸೋಲು: ಲೆಕ್ಕಚಾರ ತಲೆಕೆಳಗು!

ಬೆಂಗಳೂರು, ಫೆಬ್ರವರಿ 28; ಕರ್ನಾಟಕದಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್ 3 ಸ್ಥಾನ ಗೆದ್ದಿದೆ, ಒಂದು ಸ್ಥಾನ ಬಿಜೆಪಿಯ ಪಾಲಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆದು ಸೋತಿದ್ದಾರೆ. ಈ ಮೂಲಕ ಮೈತ್ರಿಕೂಟದ ಲೆಕ್ಕಾಚಾರ ತಪ್ಪಾಗಿದೆ ಎಂಬದು ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜಕೀಯ ತಂತ್ರಗಾರಿಕೆ ಏನು? ಎಂಬುದು ಮತ್ತೆ ಸಾಬೀತಾಗಿದೆ.

BJP JDS Alliance Calculation Went Wrong

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿಕೂಟ ಎದುರಿಸಿದ ಮೊದಲ ಚುನಾವಣೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು ಕಂಡಿದ್ದರು. ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಿದೆ.

ಪಕ್ಷೇತರ ಶಾಸಕರ ಮತಗಳು ಸಿಗಲಿಲ್ಲ: ರಾಜ್ಯಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪಡೆದಿದ್ದು 36 ಮತಗಳು ಮಾತ್ರ. ಗೆಲ್ಲಲು ಬೇಕಾಗಿದ್ದು, 45 ಮತ. ಬಿಜೆಪಿಯ 45 ಮತಗಳು ಬಿಜೆಪಿ ಅಭ್ಯರ್ಥಿಗೆ ಹಂಚಿಕೆಯಾದ ಬಳಕ ಉಳಿಯುವ ಮತ, ಜೆಡಿಎಸ್‌ನ 19 ಶಾಸಕರ ಮತ, ಪಕ್ಷೇತರ ಶಾಸಕರನ್ನು ಸೆಳೆಯುವ ಲೆಕ್ಕಾಚಾರ ಮೈತ್ರಿಕೂಟದ್ದು ಆಗಿತ್ತು.

ಆದರೆ ಬಿಜೆಪಿಯ ಒಬ್ಬರು ಶಾಸಕರು ಮತದಾನದಿಂದ ದೂರ ಉಳಿದರು. ಮತ್ತೊಬ್ಬರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಬೆಂಬಲಿಸಿದರು. ಪಕ್ಷೇತರ ಶಾಸಕರ ಬೆಂಬಲ ಪಡೆಯುವ ಲೆಕ್ಕಾಚಾರಗಳು ಡಿ. ಕೆ. ಶಿವಕುಮಾರ್ ತಂತ್ರಗಾರಿಕೆ ಎದುರು ಫಲ ಕೊಡಲಿಲ್ಲ. ಅಂತಿಮವಾಗಿ ಕುಪೇಂದ್ರ ರೆಡ್ಡಿ ಸೋಲು ಕಂಡರು.

ಮತದಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಮೈತ್ರಿಕೂಟಕ್ಕೆ 5ನೇ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬ ಸೂಚನೆ ಸಿಕ್ಕಿತ್ತು. ಆಗ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಆತ್ಮಸಾಕ್ಷಿ ಮತ ಎನ್ನುವ ಪದವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ ಎಂದೇ ಅರ್ಥ. 1969ರಲ್ಲಿ ಅಂದಿನ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಅವರು ತಮ್ಮ ಕೈಗೊಂಬೆ ರಾಷ್ಟ್ರಪತಿ ಬೇಕೆಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ಶ್ರೀ ನೀಲಂ ಸಂಜೀವರೆಡ್ಡಿ ಅವರ ವಿರುದ್ಧ ಶ್ರೀ ವಿ.ವಿ.ಗಿರಿ ಅವರನ್ನು ಕಣಕ್ಕೆ ಇಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಡ್ಡಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್" ಎಂದು ಟೀಕಿಸಿದ್ದರು.

ಪಕ್ಷೇತರ ಶಾಸಕರಾದ ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಚುನಾವಣೆಗೆ ಒಂದು ದಿನ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು. ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ ಬೆಂಬಲಿಸಿದರು. ಇದರಿಂದಾಗಿ ಮೈತ್ರಿಕೂಟದ ಲೆಕ್ಕಾಚಾರ ತಪ್ಪಾಯಿತು.

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಮತ್ತು ಜೆಡಿಎಸ್ ಈಗ ಮೈತ್ರಿ ಪಕ್ಷಗಳು. ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ. ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡು ಎದುರಿಸಲಿವೆ. ಆದರೆ ಮೈತ್ರಿಕೂಟ ರಚನೆಯಾದ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಮೈತ್ರಿಕೂಟಕ್ಕೆ ಸೋಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬಿಜೆಪಿ ಕಾಂಗ್ರೆಸ್ ಸೇರಿದ್ದ ಪುಟ್ಟಣ್ಣ ಗೆಲುವು ಸಾಧಿಸಿದರು. ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ಸೋಲಾಗಿದೆ. ಲೋಕಸಭೆ ಚುನಾವಣೆ ಮೇಲೆ ಇದು ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆದ್ದಿರುವುದು 25 ಸ್ಥಾನ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದಾರೆ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಈಗ ರಾಜ್ಯ ರಾಜಕೀಯದ ಲೆಕ್ಕಾಚಾರ ಸಂಪೂರ್ಣ ಭಿನ್ನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+