ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್ ತರಾಟೆ
ಬೆಂಗಳೂರು, ಫೆಬ್ರವರಿ 05: ಯಾವುದೇ ಧರ್ಮದ ಬಗ್ಗೆ ಶ್ರದ್ದೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ ಇವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಮಾತನಾಡಿ, ವಿರೋಧ ಪಕ್ಷದ ನಾಯಕ ಅಶೋಕ್ ಅವರ ಹೇಳಿಕೆಗೆ ಉತ್ತರಿಸಲು ನಾನು ಇಷ್ಟ ಪಡುವುದಿಲ್ಲ. ಅನವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ. ನಮ್ಮ ಪಕ್ಷದ ನಾಯಕರು ಈ ವಿಚಾರವಾಗಿ ವಿಶಾಲಾರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ, ಆಚರಣೆ, ನಂಬಿಕೆಗಳು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ವಿಚಾರವಲ್ಲ ಎಂದು ಹೇಳಿದರು.

ಪ್ರಪಂಚದಲ್ಲಿ ಹಲವಾರು ಧಾರ್ಮಿಕ ಆಚರಣೆ, ನಂಬಿಕೆಗಳಿವೆ. ನಾನು ನನ್ನ ದೇವರನ್ನು ನಂಬುತ್ತೇನೆ. ಕೆಲವರು ಹಸ್ತ ನೋಡಿಕೊಳುತ್ತಾರೆ, ಇನ್ನೂ ಕೆಲವರು ನೀರು, ಆಕಾಶ, ಸೂರ್ಯನನ್ನು ನಂಬುತ್ತಾರೆ. ಇದರಲ್ಲಿ ಸರಿ ತಪ್ಪು ಎಂಬುದಿಲ್ಲ, ಅವರವರ ನಂಬಿಕೆ ಅಷ್ಟೇ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
" ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುನ್ನುಡಿ ಬರೆದಿದ್ದೇ ಕರ್ನಾಟಕ. ಮೊದಲನೇ ಬಾರಿ ವಿಧಾನಸೌಧದ ಬಾಂಕ್ವೆಂಟ್ ಹಾಲ್ ನಲ್ಲಿ ಇದನ್ನು ನಡೆಸಲಾಗಿತ್ತು. ಇದನ್ನು ಗಮನಿಸಿದ ಅನೇಕ ರಾಜ್ಯಗಳು ಇದನ್ನು ಅನುಕರಣೆ ಮಾಡಿದ್ದವು. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆಯನ್ನಿಟ್ಟು ಬರುತ್ತಿರುವ ಎಲ್ಲಾ ಹೂಡಿಕೆದಾರರಿಗೆ ಅಭಿನಂದನೆಗಳು. ಎಲ್ಲಾ ರೀತಿಯಲ್ಲಿಯೂ ಕರ್ನಾಟಕ ಪ್ರಜ್ವಲಿಸಲಿದೆ. ಉದ್ಯೋಗ ಸೃಷ್ಟಿ ಸೇರಿದಂತೆ ಉತ್ಪಾದನೆಗೆ ಅನುಕೂಲಕರ ವಾತಾವರಣ ಉಂಟಾಗಲಿದೆ ಎಂಬುದು ನಮ್ಮ ನಂಬಿಕೆ" ಎಂದು ಹೇಳಿದರು.
ಅನೇಕ ಹೂಡಿಕೆದಾರರು ಬೆಂಗಳೂರು ಸೇರಿದಂತೆ ಹೊರಗಿನ ಜಿಲ್ಲೆಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ಒತ್ತನ್ನು ನೀಡಿದ್ದಾರೆ. ಇವರಿಗೆ ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ನೀಡಲಾಗುವುದು. ನವೋದ್ಯಮಗಳ ಪ್ರತಿ ವಿಭಾಗಕ್ಕೆ ಒಟ್ಟು 1 ಲಕ್ಷ ಡಾಲರ್ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ" ಎಂದು ಹೇಳಿದರು.
"ಸುಮಾರು 30 ಕ್ಕೂ ಹೆಚ್ಚು ನವ ನವೀನ ರೀತಿಯ ಆಲೋಚನೆ ಹೊಂದಿರುವ ನವೋದ್ಯಮಗಳು ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿಂದ ಪ್ರದರ್ಶನಕ್ಕೆ ಅರ್ಜಿಗಳು ಬಂದಿದ್ದವು. ಇವರಲ್ಲಿ ವಿನೂತನ ಚಿಂತನೆಗಳನ್ನು ಹೊಂದಿರುವ 45 ನವೋದ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ" ಎಂದರು.
"ಒಟ್ಟು 85 ಮಳಿಗೆಗಳು ಇರಲಿದ್ದು ಇಲ್ಲಿ ವಸ್ತುಪ್ರದರ್ಶನಕ್ಕೆ, ಮಾಹಿತಿ ಸಂವಹನಕ್ಕೆ ಅವಕಾಶ ಕಲ್ಪಿಸಲಾಗುವುದು. ತಾಂತ್ರಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರ ಬೆಂಗಳೂರಿಗಿಂತ ಇತರೇ ಜಿಲ್ಲೆಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರಿಗಿಂತ ಹೊರಗಿನ ಜಿಲ್ಲೆಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಎಲ್ಲಾ ಹೂಡಿಕೆದಾರರಿಗೆ ಮನವಿ ಮಾಡಲಾಗಿದೆ" ಎಂದು ತಿಳಿಸಿದರು.
ಇದೇ ಫೆ. 11 ರಿಂದ 14 ನೇ ತಾರೀಕಿನ ತನಕ ನಡೆಯುವ ಸಮಾವೇಶದ ಯಶಸ್ಸಿಗೆ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರ ನೇತೃತ್ವದ ತಂಡ ಸುಮಾರು 16 ದೇಶಗಳಿಗೆ ಭೇಟಿ ಮಾಡಿ ಅನೇಕರಿಗೆ ಆಹ್ವಾನ ನೀಡಿ ನಮ್ಮ ಕರ್ನಾಟಕದಲ್ಲಿರುವ ಮಾನವ ಸಂಪನ್ಮೂಲ, ಸಂಪತ್ತು ಸರ್ಕಾರದ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆ.11 ರಂದು ಉದ್ಘಾಟನೆಯಾದ ನಂತರ ಒಂದಷ್ಟು ಒಡಂಬಡಿಕೆಗಳಿಗೆ ಸಹಿ ಹಾಕುವ ಕಾರ್ಯಕ್ರಮವಿರಲಿದೆ" ಎಂದರು.












Click it and Unblock the Notifications