Dharmasthala Case: ಧರ್ಮಸ್ಥಳ ಪ್ರಕರಣದಲ್ಲೂ ರಾಜಕೀಯ, ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ: ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 18: ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ 'ಧರ್ಮಸ್ಥಳ ಚಲೋ' ಅಭಿಯಾನ ಆರಂಭಿಸಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಕೆಲವು ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಡೆಸುತ್ತಿರುವ ಪಿತೂರಿ ಖಂಡಿಸಿ ಬೃಹತ್ ಯಾತ್ರೆ ಕೈಗೊಂಡಿದ್ದು, ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲಿ ಇದು ರಾಜಕೀಯದ ಯಾತ್ರೆ. ಧರ್ಮದ ಯಾತ್ರೆಯಲ್ಲ. ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ. ಸಾರ್ವಜನಿಕರ ಸ್ವತ್ತು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಕೇಳಿದಾಗ, "ನಗರದಲ್ಲಿ ಶೇ.70 ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ನೂತನ ಬಿಡಿಎ ಲೇಔಟ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗ ಸುಪ್ರೀಂ ಕೋರ್ಟ್ ತೀರ್ಪು ವಾಸಯೋಗ್ಯ ಪ್ರಮಾಪತ್ರವಿಲ್ಲದೇ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮಾರ್ಗದರ್ಶನ ನೀಡಿದೆ. ಈ ಕಾರಣಕ್ಕೆ 4 ಲಕ್ಷ ಸಂಪರ್ಕಗಳನ್ನು ನಿಲ್ಲಿಸಲಾಗಿದೆ. 30/40 ಅಳತೆಯ ಎರಡು ಮಹಡಿಯ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು ಎನ್ನುವ ವಿಚಾರವನ್ನು ಕ್ಯಾಬಿನೆಟ್ ಮುಂದೆ ತರಲಾಗುವುದು. ಸಂಪುಟ ಸಹೋದ್ಯೋಗಿಗಳು ಏನು ಹೇಳುತ್ತಾರೊ ನೋಡೋಣ" ಎಂದರು.
ಚಿಕ್ಕಪೇಟೆ, ನಗರ್ತಪೇಟೆ ಇವುಗಳು ಹೆಸರಿಗೆ ವಾಸಸ್ಥಳಗಳು, ಆದರೆ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿವೆ ಎಂದು ಕೇಳಿದಾಗ, "ಜನರ ಬಡತನದ ಬದುಕು. ಅಗ್ನಿಶಾಮಕ ನಿಯಮದ ಪ್ರಕಾರ ಹೋದರೆ ಎಲ್ಲಾ ಕಟ್ಟಡಗಳನ್ನು ಒಡೆದು ಹಾಕಬೇಕಾಗುತ್ತದೆ ಎಂದರು. ಅನೇಕ ಕಟ್ಟಡಗಳ ಮೇಲ್ಬಾಗಕ್ಕೆ ಹತ್ತಲು ಸಹ ಆಗುತ್ತಿಲ್ಲ. ಶಾರ್ಟ್ ಸರ್ಕೀಟ್ ಆದ ಕಾರಣಕ್ಕೆ ಬೆಂಕಿ ಹೊತ್ತುಕೊಂಡು ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ರಾಜಸ್ಥಾನ ಮೂಲದವರು. ಎಲ್ಲಿಯವರು ಆದರೇನು ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು ಎಂದರು.
ಎರಡು ದಿನಗಳ ಹಿಂದೆ ಸಿಲಿಂಡರ್ ಸ್ಪೋಟಗೊಂಡು ಮನೆ ಹಾನಿಯಾಗಿದೆ, ಜನರ ಗಾಯಗೊಂಡಿದ್ದಾರೆ. ಬೆಂಕಿಗೆ ಸಿಲುಕಿ ಐದು ಮಂದಿ ಸತ್ತಿದ್ದಾರೆ. ಬಾಡಿಗೆಗಾಗಿ ಹೀಗೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದೇ ಇದೆಲ್ಲದಕ್ಕೂ ಕಾರಣ. ಇದು ಸರಿಯಲ್ಲ ಎಂದರು. ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅವಘಡ ನಡೆದ ಕಟ್ಟಡದ ಮಾಲೀಕರನ್ನೂ ಸಹ ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಗಳ ಕುಟುಂಬಸ್ಥರಿಗೆ ರೂ. 5 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಕೂಡಲೇ ದುರ್ಬಲ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ಥಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ದುರ್ಬಲಗೊಂಡಿರುವ ಕಟ್ಟಡಗಳು ಕುಸಿತವಾಗಿ ದೊಡ್ಡ ಸಮಸ್ಯೆ ಎದುರಾಗುವುದು ಬೇಡ. ಭವಿಷ್ಯದಲ್ಲಿ ಈ ರೀತಿಯಾಗಿ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.












Click it and Unblock the Notifications