ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೀತಾರಾ? ಹೈಕಮಾಂಡ್‌ನಿಂದ ಬಿಗ್ ಅಪ್ಡೇಟ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯಿಂದ ಬಿ.ವೈ.ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಭದ್ರವಾಗಿದೆ ಎಂದು ಹೇಳಲಾಗಿತ್ತು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂದು ಯತ್ನಾಳ್ ಸೇರಿದಂತೆ ಹಲವರು ತೊಡೆ ತಟ್ಟಿದ್ದರು. ಅಲ್ಲದೆ ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ನಡೆಸುವುದಾಗಿಯೂ ಹೈಕಮಾಂಡ್ ಹೇಳಿತ್ತು. ಬಳಿಕ ವಿಜಯೇಂದ್ರ ವಿರುದ್ಧ ಈ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿಯಲು ಹಲವರು ಸಜ್ಜಾಗಿದ್ದರು. ಆದರೆ, ಯತ್ನಾಳ್ ಅವರ ಉಚ್ಛಾಟನೆಯಿಂದ ಎಲ್ಲರೂ ಗಪ್‌ಚುಪ್ ಆಗಿದ್ದರು. ಸದ್ಯ ರಾಜ್ಯಾಧ್ಯಕ್ಷರಾಗಿ ಯಾರು ಕರ್ನಾಟಕ ಬಿಜೆಪಿಯನ್ನ ಮುನ್ನಡೆಸಲಿದ್ದಾರೆ? ಎಂಬ ಬಗ್ಗೆ ಹೈಕಮಾಂಡ್‌ನಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.
ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಇದರಿಂದ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿತ್ತು. ಅಲ್ಲದೆ ವಿಜಯೇಂದ್ರ ವಿರುದ್ಧ ಹಲವು ನಾಯಕರು ದೆಹಲಿಗೆ ತೆರಳಿ, ದೂರು ಕೂಡ ಕೊಟ್ಟಿದ್ದರು. ಇದೆಲ್ಲವನ್ನೂ ಗಮನಿಸಿದ ಹೈಕಮಾಂಡ್ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಛಾಟಿಸುವ ಮೂಲಕ ಎಲ್ಲರ ಬಾಯಿಗೆ ಬೀಗ ಹಾಕಿತ್ತು. ಈ ಬೆಳವಣಿಗೆ ಬೆನ್ನಲ್ಲೇ ವಿಜಯೇಂದ್ರ ಅವರು ಪಕ್ಷ ಸಂಘಟನೆ ಬಗ್ಗೆ ಮಾತನಾಡುವ ಮೂಲಕ ತಮ್ಮ ಸ್ಥಾನ ಭದ್ರ ಎಂದು ಸಂದೇಶ ನೀಡಿದ್ದರು. ಆದರೆ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೇನು ಎಂಬ ವಿವರ ಇಲ್ಲಿದೆ.

ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆ ಹಾಗೂ ಬದಲಾವಣೆ ಮಾಡಲು ನಿರ್ಧಾರ ತೆಗೆದುಕೊಂಡಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯೂ ಮಾಡಲು ಚಿಂತನೆ ನಡೆಸಿದೆಯಂತೆ. ಹಾಗಾಗಿ ವಿವಿಧ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆದ ನಂತರವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಾಗಾಗಿ ಈ ಪ್ರಕ್ರಿಯೆ ಮತ್ತಷ್ಟು ನಿಧಾನವಾಗುವ ಸಾಧ್ಯತೆ ಇದೆ.
ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧ್ಯಕ್ಷರ ಆಯ್ಕೆ ಮಾಡಬೇಕಿದ್ದು, ಶೀಘ್ರದಲ್ಲೇ ಇದಕ್ಕೆ ಚುನಾವಣೆ ನಡೆಸಲು ಹೈಕಮಾಂಡ್ ಸಜ್ಜಾಗಿದೆ. ಸದ್ಯ ಈಗಿರುವ ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್, ಮಧ್ಯಪ್ರದೇಶ ಘಟಕದ ಅಧ್ಯಕ್ಷ ಶರ್ಮಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಚಿಂತನೆ ನಡೆದಿದೆ.
ಇನ್ನು ಕರ್ನಾಟಕದಲ್ಲೂ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಚುನಾವಣೆ ನಡೆಸುವುದಾಗಿ ಹೇಳಿರುವ ಹೈಕಮಾಂಡ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಅನುಮಾನ ಎನ್ನಲಾಗಿದೆ. ಬದಲಾಗಿ ಕರ್ನಾಟಕದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸುವ ಲಕ್ಷಣಗಳು ದಟ್ಟವಾಗಿವೆ ಎಂದು ಹೈಕಮಾಂಡ್ ಸುಳಿವು ನೀಡಿದೆ. ಸದ್ಯಕ್ಕೆ ವಿಜಯೇಂದ್ರ ಅವರ ಕುರ್ಚಿ ಸೇಫ್ ಎನ್ನಲಾಗಿದೆ.












Click it and Unblock the Notifications