Bjp: ʻಕರ್ನಾಟಕ ಬಿಜೆಪಿ ಒಳಜಗಳ ಬಿಜೆಪಿ ಹೈಕಮಾಂಡ್‌ಗೆ ಗೊತ್ತಾಗಿದೆʼ
ಬಿಜೆಪಿಯಲ್ಲಿ ಒಳಜಗಳ ಹಾಗೂ ಭಿನ್ನಮತ ಇದೀಗ ಬೀದಿಗೆ ಬಂದು ನಿಂತಿದೆ. ಬಿಜೆಪಿಯಲ್ಲಿ ನಾಯಕರು ಕಿತ್ತಾಡುತ್ತಿರುವುದನ್ನು ನೋಡಿ ಬಿಜೆಪಿಯ ಕಾರ್ಯಕರ್ತರೂ ಸಹ ಕಸಿವಿಸಿಗೆ ಒಳಗಾಗುತ್ತಿದ್ದಾರೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ (ಬಿಜೆಪಿ ಮೈತ್ರಿ) ಸೋತ ನಂತರವಂತೂ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಬಿಜೆಪಿಯ ನಾಯಕರೇ ಇದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್‌ನಲ್ಲಿ ಈ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.
ಬಿಜೆಪಿಯಲ್ಲಿನ ಗೊಂದಲವು ಪಕ್ಷದ ವರಿಷ್ಠರ ಗಮನಕ್ಕೆ ಈಗಾಗಲೇ ಬಂದಿದೆ. ಅವರೆಲ್ಲ ಸರಿಯಾದ ಸಮಯಕ್ಕೆ ಯೋಗ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಯಾವಾಗಲೂ ನಮ್ಮ ಪಕ್ಷದಲ್ಲಿ ಇಂತಹ ಭಿನ್ನಾಭಿಪ್ರಾಯಗಳು ಬಂದಾಗ ಹಿರಿಯ ನಾಯಕರು ಅದನ್ನು ಸರಿ ಮಾಡುತ್ತಾರೆ ಎಂದಿದ್ದಾರೆ. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರು ಬಸವಣ್ಣನವರ ಬಗ್ಗೆ ಹೇಳಿರುವ ಹೇಳಿಕೆ ಬಗ್ಗೆ ನಾನು ಯಾವುದೇ ಟಿಪ್ಪಣಿ ಮಾಡುವುದಿಲ್ಲ.

ರಾಜಕೀಯ ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿಯಲ್ಲಿ ಗೊಂದಲ ಬೇಗನೇ ಬಗೆಹರಿಯುತ್ತದೆ. ಕಾಂಗ್ರೆಸ್, ಬೇರೆ ಪಕ್ಷಗಳಲ್ಲಿ ಗೊಂದಲ ಕಾಯಂ ಇರುತ್ತದೆ ಎಂದರು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿರುವ ಬಗ್ಗೆ ಕಾಂಗ್ರೆಸ್ಸಿಗರು ನೀತಿ ಆಯೋಗದ ಸಭೆಯಲ್ಲಿ, ಸಂಸತ್ ಅಧಿವೇಶನದಲ್ಲಿ ಮಾತನಾಡುವುದಿಲ್ಲ. ಸಂಸತ್ ಅಧಿವೇಶನದಲ್ಲಿ ಗದ್ದಲ-ಗಲಾಟೆ ಮಾಡಿ ಯಾವುದೇ ವಿಷಯದ ಕುರಿತು ಚರ್ಚೆ ಮಾಡಲು ಅವಕಾಶ ಕೊಡುವುದಿಲ್ಲ. ತಾವು ಮಾತನಾಡುವುದಿಲ್ಲ, ನಮಗೂ ಉತ್ತರ ಕೊಡಲು ಅವಕಾಶ ಕೊಡುವುದಿಲ್ಲ.
ಹೊರಗಡೆ ರಾಜಕೀಯ ಉದ್ದೇಶದಿಂದ ಅನುದಾನ ಹಂಚಿಕೆ, ಮಹದಾಯಿ ವಿಷಯದಲ್ಲಿ ಅನ್ಯಾಯವಾಗಿದೆಯೆಂದು ಮಾತನಾಡುತ್ತಾರೆ ಎಂದು ಟೀಕಿಸಿದರು. ಅಲ್ಲದೇ ಮುಡಾ, ವಾಲ್ಮೀಕಿ ಹಗರಣದಲ್ಲಿ ಲೋಕಾಯುಕ್ತ, ಇಡಿ ತನಿಖೆ ನಡೆಯುತ್ತಿದ್ದು, ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಹಳೇ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಸುಮ್ಮನೆ ಕುಳಿತಿದ್ದು ಯಾಕೆ ಎಂಬುದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು. ರಾಜಕೀಯ ದ್ವೇಷ ಸಾಧನೆ ಹಾಗೂ ಬಿಜೆಪಿ ವಿರುದ್ಧ ಅಪ ಪ್ರಚಾರ ನಡೆಸುವ ಇಂಥ ಪ್ರಯತ್ನಗಳು ಕಾಂಗ್ರೆಸ್ಸಿಗೆ ವ್ಯತಿರಿಕ್ತ ಪರಿಣಾಣ ಉಂಟು ಮಾಡಲಿದೆ ಎಂದು ಅವರು ಎಚ್ಚರಿಸಿದರು.
ಬಿಜೆಪಿ ನಾಯಕರ ಅಸಮಾಧಾನ: ಇನ್ನು ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗುತ್ತಿರುವುದು ಹಾಗೂ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿರುವುದು ಬಿಜೆಪಿ ನಾಯಕರಲ್ಲಿ ಅಸಮಾಧಾನ ಸೃಷ್ಟಿಸಿದೆ. ಈಚೆಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಸಹ ಇದೇ ವಿಚಾರಕ್ಕೆ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವನ್ನು ನಾನು ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದಿದ್ದರು.












Click it and Unblock the Notifications