DV Sadananda Gowda: ಬಿಜೆಪಿ ಬಿಡುವ ಆತಂಕ: ಸದಾನಂದಗೌಡರಿಗೆ ಭರ್ಜರಿ ಆಫರ್ ಕೊಟ್ಟ ಬಿಜೆಪಿ ಹೈಕಮಾಂಡ್
ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಪಟ್ಟಿಯನ್ನ ಬಿಡುಗಡೆಗೊಳಿಸಿದ ಬೆನ್ನೆಲ್ಲೇ ಕಮಲ ಪಾಳಯದಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ.
ಹೌದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಕಮಲ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. ಅಲ್ಲದೇ ಟಿಕೆಟ್ ಕೈ ತಪ್ಪಿದ ಎಲ್ಲಾ ಬಿಜೆಪಿ ನಾಯಕರನ್ನ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದು, ಸದಾನಂದಗೌಡರನ್ನ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಲೋಕಸಭಾ ಚುನಾವಣಾ ಹೊತ್ತಲಿ ಪಕ್ಷದ ಹಿರಿಯ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಹೋದರೆ ಪಕ್ಷ ಸಾಕಷ್ಟು ಡ್ಯಾಮೇಜ್ ಆಗಲಿದೆ ಎಂದು ಬಿಜೆಪಿ ನಾಯಕರು ಸದಾನಂದಗೌಡರನ್ನ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಅಲ್ಲದೇ ಸದಾನಂದಗೌಡರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ಕೊಟ್ಟು ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.
ಬಿಜೆಪಿ ಪಾಳಯದಲ್ಲಿ ಟಿಕೆಟ್ ಕೈ ತಪ್ಪಿರುವ ಕಾರಣ ಹಲವು ಹಿರಿಯ ನಾಯಕರು ಅಸಮಾಧಾನಗೊಂಡಿದ್ದು, ಈ ಅಸಮಾಧಾನ ಶಮನಕ್ಕೆ ರಾಜ್ಯ ನಾಯಕರು ಮುಂದಾಗಿದ್ದಾರೆ. ಒಕ್ಕಲಿಗ ನಾಯಕರಾಗಿರುವ ಸದಾನಂದಗೌಡರಿಗೆ ಕಾಂಗ್ರೆಸ್ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ನೀಡಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳು ಪ್ರಯತ್ನ ನಡೆಸಿದರು. ಅಲ್ಲದೇ ಬಿಜೆಪಿ ಹೈಕಮಾಂಡ್ ಸಹ ಕರೆ ಮಾಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಗ್ಗೆ ಹೈಕಮಾಂಡ್ ಆಫರ್ ನೀಡಿದ್ದರೂ ಸದಾನಂದಗೌಡ ಅವರು ಸಹಮತ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಯಾವುದೇ ತಿರ್ಮಾನ ತೆಗೆದುಕೊಳ್ಳಬೇಡಿ. ವರಿಷ್ಠರ ಜೊತೆ ಚರ್ಚೆ ನಡೆಸುವ ಬಗ್ಗೆ ಸದಾನಂದಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಈಗಾಗಲೇ ಸೋಮವಾರ ಹಲವು ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಆದರೆ, ಆ ಸಂಧಾನ ಸಭೆ ಯಶಸ್ವಿಯಾಗದ ಹಿನ್ನೆಲೆ ಬಿ ವೈ ವಿಜಯೇಂದ್ರ ಅವರು ಭರವಸೆ ಕೊಟ್ಟು ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿ ನಡೆಸುವ ಮೂಲಕ ತನ್ನ ನಿರ್ಧಾರವನ್ನ ತಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಡಿ ವಿ ಸದಾನಂದಗೌಡ ಅವರು ತಿಳಿಸಿದ್ದರು. ಆದರೆ ಬೆಳಗ್ಗೆ ವರಿಷ್ಠರ ಕರೆ ಹಿನ್ನೆಲೆ ಸದಾನಂದಗೌಡ ಅವರು ಸುದ್ದಿಗೋಷ್ಠಿ ಮುಂದೂಡಿದರೆ, ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪರೋಕ್ಷವಾಗಿ ಅಸಮಾಧಾನ ಹೊದ ಹಾಕಿದ್ದ ಸದಾನಂದಗೌಡ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ನೀಡಿದ್ದು, ಇದಕ್ಕೆ ಸದಾನಂದಗೌಡರು ಒಪ್ಪಿಗೆ ಸೂಚಿಸಿಲ್ಲ.
ಒಟ್ನಲಿ, ಟಿಕೆಟ್ ಗಾಗಿ ಹೊತ್ತಿಕೊಂಡ ಬಂಡಾಯದ ಕಿಚ್ಚು ಜೋರಾಗಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಗಾಗಿ ಹಗ್ಗಜಗ್ಗಾಟ ಬಿಜೆಪಿ ಹೈಕಮಾಂಡ್ ದೊಡ್ಡ ತಲೆನೋವಾಗಿದ್ದು, ಅಭ್ಯರ್ಥಿಯ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸದಾನಂದಗೌಡರನ್ನು ಪಕ್ಷಕ್ಕೆ ಸೇಳೆಯುವ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಸದಾನಂದಗೌಡ ಅಸಮಾಧಾನ ಶಮನವಾಗುತ್ತಾ ಅಥವಾ ಬಿಜೆಪಿಗೆ ಶಾಕ್ ಕೊಟ್ಟು ಕಾಂಗ್ರೆಸ್ ಹೋಗುತ್ತಾರಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ಸದಾನಂದಗೌಡ್ರು ಕಾಂಗ್ರೆಸ್ ಸೇರಲ್ಲ
ಇನ್ನೂ ಮಾಜಿ ಸಿಎಂ ಡಿ. ವಿ. ಸದಾನಂದ ಗೌಡರು ಕಾಂಗ್ರೆಸ್ ಸೇರುವುದಿಲ್ಲ ಎಂದು ಎಸ್. ಹರೀಶ್, ಜಿಲ್ಲಾಧ್ಯಕ್ಷರು, ಬೆಂಗಳೂರು ಉತ್ತರ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಮ್ಮ ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು. ಸದಾನಂದ ಗೌಡರು ಶಿಸ್ತಿನ ಸಿಪಾಯಿ. ಸಂಘ ಪರಿವಾರದ ಸದಸ್ಯರು. ಅವರು ಕಾಂಗ್ರೆಸ್ ಇಂದ ಆಫರ್ ಬಂದಿದೆ ಎಂದಷ್ಟೇ ಹೇಳಿದ್ದು. ಆದರೆ ಸೇರುತ್ತೇನೆ ಎಂದು ಹೇಳಲೇ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications