ʼಕಾಂಗ್ರೆಸ್ ಮುಖಂಡರಿಂದಲೇ ಕೈ ಕಾರ್ಯಕರ್ತನ ಕೊಲೆʼ; ಬಿಜೆಪಿಯಿಂದ 10 ಲಕ್ಷ ಪರಿಹಾರ: ಬಿ ವೈ ವಿಜಯೇಂದ್ರ
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಶೇಖರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಚೆಲ್ಲಾಟ ಆಡದೇ ಸಮಗ್ರ ತನಿಖೆ ಮಾಡಿಸಬೇಕು. ಬಡ ಕುಟುಂಬಕ್ಕೆ ನ್ಯಾಯ ಸಿಗಲು ಸಿಬಿಐ ತನಿಖೆ ಮಾಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮೃತ ರಾಜಶೇಖರ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರರನ್ನು ಕೊಲೆ ಮಾಡಿದ್ದಾರೆ. ಅವರೇ ಗುಂಡು ಹಾರಿಸಿದ್ದರಿಂದ ಪ್ರಾಣ ಕಳಕೊಂಡಿದ್ದಾರೆ ಎಂದು ಆರೋಪಿಸಿದರು. ನಾವು ಇವತ್ತು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ- ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಪ್ರಮುಖರು ಸೇರಿ ಬಡ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಅವರ ತಾಯಿಯನ್ನೂ ಭೇಟಿ ಮಾಡಿದ್ದೇವೆ. ಅವರಿಗೆ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ ಎಂದರು. ಆದರೆ, ಯಾವುದೇ ಪರಿಹಾರದಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಿ.ಶ್ರೀರಾಮುಲು ಅವರು ಮಾತನಾಡಿ, ರಾಜಶೇಖರರ ಸಾವಿನ ಸಂದರ್ಭದಲ್ಲಿ ಅನೇಕ ಜನರಲ್ಲಿ ಗೊಂದಲ ಇತ್ತು. ಬಿಜೆಪಿಯವರಿಂದ ಕೊಲೆ ಆಗಿದೆ ಎಂದು ತಿಳಿಸುವ ಕೆಲಸ ಮಾಡಿದ್ದರು. ಈ ಕೊಲೆ ಕಾಂಗ್ರೆಸ್ಸಿನವರಿಂದಲೇ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು. ಸಾವು ಯಾರಿಂದ ಎಂಬ ವಿಷಯದಲ್ಲಿ ಗೊಂದಲ ಇದ್ದ ಕಾರಣ ಕೂಡಲೇ ಇಲ್ಲಿ ಬಂದಿರಲಿಲ್ಲ. ಇದೀಗ ಪರಿಹಾರದ ಹಣವನ್ನು ಚೆಕ್ ಮೂಲಕ ಮೃತರ ತಾಯಿಗೆ ಕೊಡಲಾಗಿದೆ ಎಂದರು.
ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಗುಂಡು ಹಾರಿಸಿದವರು ಸುಪಾರಿ ಕಿಲ್ಲರ್‍ಗಳು. ಅವರು ಸರಕಾರಿ ಗನ್‍ಮ್ಯಾನ್‍ಗಳಲ್ಲ ಎಂದು ತಿಳಿಸಿದರು. ಸುಪಾರಿ ಕಿಲ್ಲರ್‍ಗಳನ್ನು ಕರೆದುಕೊಂಡು ಬಂದು ಭರತ್ ರೆಡ್ಡಿ ದೊಡ್ಡ ಅಪರಾಧ ಮಾಡಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ನೈತಿಕತೆ ಇದ್ದರೆ ಮೊದಲು ಭರತ್ ರೆಡ್ಡಿಯವರನ್ನು ಬಂಧಿಸಿ; ನಂತರ ತನಿಖೆ ಮಾಡಿ ಎಂದು ಆಗ್ರಹಿಸಿದರು. ಇಲ್ಲವೇ ಸಿಬಿಐಗೆ ತನಿಖೆ ಒಪ್ಪಿಸಿ ಎಂದು ಒತ್ತಾಯಿಸಿದರು. ಅಧಿಕಾರ ಶಾಶ್ವತವಲ್ಲ; ಯಾವ ರೀತಿ ಅಧಿಕಾರ ಮಾಡಿದ್ದೀರಿ ಎಂಬುದಷ್ಟೇ ಶಾಶ್ವತ ಎಂದು ಕಿವಿಮಾತು ಹೇಳಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಜನಾರ್ಧನ ರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ಬಿ.ಶ್ರೀರಾಮುಲು ಅವರು ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ಸಿನ ಬಳ್ಳಾರಿ ಜಿಲ್ಲೆಯ ನಾಯಕರ ಕುರ್ಚಿ ಅಲ್ಲಾಡತೊಡಗಿದೆ. ರಾಮುಲು ಅವರ ವೇಗ- ಜನಾರ್ಧನ ರೆಡ್ಡಿಯವರ ಶಕ್ತಿ, ಬಿರುಗಾಳಿ ಮತ್ತು ಬೆಂಕಿಯಂತೆ ಎಂದು ಅವರು ನುಡಿದರು. ಇದೇ ಕಾರಣಕ್ಕಾಗಿ ಬಳ್ಳಾರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿಸಿದರು.
ಅವರ ಬಳಿ ಎಷ್ಟು ಗುಂಡಿದೆಯೋ ನಾವೂ ನೋಡೋಣ ಎಂದು ಸವಾಲು ಹಾಕಿದರು. ಅವರೆಷ್ಟೇ ಗುಂಡು ಹೊಡೆದರೂ ನಮ್ಮ ಶಕ್ತಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಹುಬ್ಬಳ್ಳಿಯಲ್ಲಿ ಪೊಲೀಸರು ದಲಿತ ಹೆಣ್ಮಗಳ ಬಟ್ಟೆ ತೆಗೆದಿದ್ದಾರೆ. ಅವರೇ ತೆಗೆದಿದ್ದಾರೆಂದು ಕಮೀಷನರ್ ಸುಳ್ಳು ಕಟ್ಟು ಕಥೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.












Click it and Unblock the Notifications