BJP Manifesto 2023: ಮಧ್ಯ ಕರ್ನಾಟಕಕ್ಕೆ ಬಿಜೆಪಿ ಭರವಸೆ ನೀಡಿದ್ದೇನು? ಹಿಂದಿನ ಸಾಧನೆಗಳೇನು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಎದುರು ನೋಡುತ್ತಿರುವ ಆಡಳಿತರೂಢ ಬಿಜೆಪಿ ಪಕ್ಷ ಸೋಮವಾರ (ಮೇ 1)ರಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯದ ಮತದಾರರನ್ನು ಸೆಳೆಯಲು ಹಲವು ಭರವಸೆಗಳನ್ನು ನೀಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಕೆ. ಸುಧಾಕರ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

ಬಿಜೆಪಿ ತನ್ನ ಪ್ರಣಾಳಿಕೆ ಪತ್ರದಲ್ಲಿ ಪ್ರಮುಖ 16 ಅಂಶಗಳ ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ಮಧ್ಯ ಕರ್ನಾಟಕಕ್ಕೆ ಏನೆಲ್ಲಾ ಭರವಸೆಗಳನ್ನು ನೀಡಲಾಗಿದೆ ಎಂಬುದನ್ನು ಈ ಕೆಳಗೆ ತಿಳಿಯಿರಿ.
ಬಿಜೆಪಿ ಪ್ರಣಾಳಿಕೆಯಲ್ಲಿ ಮಧ್ಯ ಕರ್ನಾಟಕಕ್ಕೆ ಭರವಸೆಗಳು
1) ಭದ್ರಾ ಮೇಲ್ದಂಡೆಯಂತಹ ಪ್ರಮುಖ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ನೀರಾವರಿ ವ್ಯವಸ್ಥೆಯನ್ನು ಸಮರ್ಪಕಗೊಳಿಸುತ್ತೇವೆ.
2) ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಏಮ್ಸ್ ಮಾದರಿಯಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸ್ಥಾಪಿಸಲಾಗುವುದು.
3) ದಾವಣಗೆರೆಯಲ್ಲಿ ಆಹಾರ ಸಂಸ್ಕರಣಾ ಪಾರ್ಕ್ ಸ್ಥಾಪಿಸಲು ಕೆ-ಅಗ್ರಿ ಫಂಡ್ ಬಳಸಲಾಗುವುದು.

4) ಈಗಿರುವ ಕೆರೆಗಳಿಗೆ ಕಾಯಕಲ್ಪ ನೀಡಲು ಮತ್ತು ಕೃತಕ ಕೆರೆಗಳನ್ನು ನಿರ್ಮಿಸಲು ಪೈಪ್‌ಲೈನ್ ಸೇರಿದಂತೆ ನೀರಿನ ಸೌಲಭ್ಯ ಕಲ್ಪಿಸಲು 500 ಕೋಟಿ ರೂ. ಮೀಸಲಿಡುತ್ತೇವೆ.
ಮಧ್ಯ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಸಾಧನೆಗಳು
* ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೆ ಯೋಜನೆಗೆ 220 ಕೋಟಿ ರೂ. ಮಂಜೂರು ಮಾಡಲಾಗಿದೆ.
* ಭದ್ರಾ ಮೇಲ್ದಂಡೆ ಯೋಜನೆಗೆ ಮೊದಲ ಕಂತಿನಲ್ಲಿ 5300 ಕೋಟಿ ರೂ. ಮಂಜೂರು ಮಾಡಲಾಗಿದೆ.
* ವಾಣಿ ವಿಲಾಸ ಸಾಗರ ಕಾಲುವೆಗಳ ಹೂಳು ತೆಗೆಯಲು ಹಾಗೂ ಆಧುನೀಕರಣಕ್ಕೆ 738 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ.
* ಹೊಸಪೇಟೆ ಮತ್ತು ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ದ್ವಿಪಥದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪತ ಎಕ್ಸ್‌ಪ್ರೆಸ್‌ವೇ ಆಗಿ ಮೇಲ್ದರ್ಜೆಗೆ ಏರಿಸಲಾಗುವುದು.
* ಚಿತ್ರದುರ್ಗ, ಮೊಳಕಾಲ್ಮೂರು ಸೇರಿದಂತೆ 9 ಸ್ಥಳಗಳಲ್ಲಿ ಕೆಎಸ್‌ಎಸ್ಐಡಿಸಿಯಿಂದ ಹೊಸ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ 2023-24ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.
* ದಾವಣಗೆರೆ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ441 ಕೋಟಿ ರೂ. ವೆಚ್ಚದಲ್ಲಿ 69 ಯೋಜನೆಗಳನ್ನು ಕೈಗೆತ್ತಿಕೊಂಡಿದೆ.












Click it and Unblock the Notifications