Priyank Kharge: ಮರಿ ಖರ್ಗೆಯನ್ನ ಬಂಧಿಸುವ ಧಮ್ ಸರ್ಕಾರಕ್ಕೆ ಇದೆಯಾ: ಸವಾಲ್ ಹಾಕಿದ್ಯಾರು?
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಬಂಧನವಾಗಿದ್ದು, ಮರಿ ಖರ್ಗೆಯನ್ನ (ಪ್ರಿಯಾಂಕ್ ಖರ್ಗೆ) ಬಂಧಿಸುವ ಧಮ್ ಸರ್ಕಾರಕ್ಕೆ ಇದೆಯಾ? ಎಂದು ಬಿಜೆಪಿ ಸವಾಲು ಹಾಕಿದೆ. ಪ್ರಕರಣ ನಡೆದು ಎರಡು ವಾರ ಕಳೆದ ಬಳಿಕ ಆರೋಪಿಯನ್ನು ಬಂಧಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಒದಗಿಸಿಕೊಟ್ಟಿದೆ ಎಂದು ಆರೋಪಿಸಿದೆ.
ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ರಾಜು ಕಪನೂರು ಒಬ್ಬ ಗ್ಯಾಂಗ್ ಮಾಸ್ಟರ್ ಅಷ್ಟೇ, ಸಚಿವ ಪ್ರಿಯಾಂಕ್ ಖರ್ಗೆ ಇದರ ರಿಂಗ್ ಮಾಸ್ಟರ್. ಮರಿ ಖರ್ಗೆಯನ್ನು ಬಂಧಿಸುವ ಧಮ್ ಸರ್ಕಾರಕ್ಕೆ ಇದೆಯಾ? ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆಯ ಹೆಸರೂ ಉಲ್ಲೇಖವಾಗಿರುವುದರಿಂದ ಮೃತನಿಗೆ ನ್ಯಾಯ ಒದಗಿಸಬೇಕಾದರೆ ಸಚಿವ ಖರ್ಗೆಯ ಬಂಧನದ ಅಗತ್ಯತೆಯಿದೆ. ಮಾನ್ಯ ಸಿದ್ದರಾಮಯ್ಯನವರೇ ರಿಂಗ್ ಮಾಸ್ಟರ್ ಪ್ರಿಯಾಂಕ್ ಖರ್ಗೆಯ ಬಂಧನವೆಂದು? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಮೀಷನ್ ಬೇಡಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಾಂಚಾಳ್ ಪ್ರಕರಣ ಹಳ್ಳ ಹಿಡಿಯುತ್ತಿದೆ. ಸಿಐಡಿ ತನಿಖೆಯಲ್ಲಿ ಖರ್ಗೆ ಕುಟುಂಬದ ಪ್ರಭಾವ ಎದ್ದು ಕಾಣುತ್ತಿದೆ. ಖರ್ಗೆ ಕುಟುಂಬದ ಹಸ್ತಕ್ಷೇಪದಿಂದಾಗಿಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನೂ ಬಂಧಿಸಿಲ್ಲ ಎಂದು ಬಿಜೆಪಿ ಆರೋಪಿಸಿತ್ತು.
ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ಬರೆದಿರುವ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಿಯಾಂಕ್ ಖರ್ಗೆಯ 9 ಮಂದಿ ಅತ್ಯಾಪ್ತರ ಹೆಸರು ಉಲ್ಲೇಖಗೊಂಡಿದೆ. ಆದರೆ ಸಿಐಡಿ ತನಿಖೆ ಆರಂಭವಾಗಿ 13 ದಿನ ಕಳೆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಹರಿಹಾಯ್ದಿತ್ತು.

ಪ್ರಕರಣದಲ್ಲಿ ಕೇವಲ ಕಾಂಗ್ರೆಸ್ ಸಚಿವರ, ಸರ್ಕಾರದ ಪ್ರಭಾವವಲ್ಲದೆ, ಎಐಸಿಸಿ ಪ್ರಭಾವವೂ ಎದ್ದು ಕಾಣುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕುಟುಂಬ ಕೇಂದ್ರೀಕೃತವಾಗಿ ತನಿಖೆ ನಡೆಸದಂತೆ ತನಿಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿತ್ತು.
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಐದು ಮಂದಿ ಆರೋಪಿಗಳನ್ನು ನಿನ್ನೆ ಬಂಧಿಸಿದ್ದರು. ಇತ್ತೀಚೆಗೆ ಗುತ್ತಿಗೆದಾರ ಸಚಿನ್ ಅವರು ಡೆತ್‌ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಲ್ಲದೆ, ಅದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನೂ ಎನ್ನಲಾದ ವ್ಯಕ್ತಿ ಸೇರಿ ಹಲವರ ಹೆಸರಿತ್ತು.

ಸಚಿವ ಪ್ರಿಯಾಂಕ್ ಅವರ ಆಪ್ತ ಎನ್ನಲಾದ ರಾಜು ಕಪನೂರು ಸೇರಿದಂತೆ ಒಟ್ಟು ಎಂಟು ಮಂದಿಯ ಹೆಸರು ಡೆತ್‌ನೋಟ್‌ನಲ್ಲಿ ಇತ್ತು. ಈ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಗಳು ಆರೋಪಿಗಳಾದ ರಾಜು ಕಪನೂರು, ರಾಮನಗೌಡ ಪಾಟೀಲ್, ಸತೀಶ್, ಗೋರಕ್ ನಾಥ್, ನಂದಕುಮಾರ್ ನಾಗಬುಜಂಗಿ ಎಂಬುವವರನ್ನು ಬಂಧಿಸಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಗುತ್ತಿಗೆದಾರನ ಡೆತ್‌ನೋಟ್ ವಿಚಾರವಾಗಿ ಬಿಜೆಪಿ ಕೂಡ ಬೃಹತ್ ಪ್ರತಿಭಟನೆ ಮಾಡಿತ್ತು. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿದ್ದು, ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರಾಜಕೀಯವಾಗಿ ಸಂಘರ್ಷಕ್ಕೆ ಕಾರಣವಾಗಿದ್ದ ಈ ಸೂಸೈಡ್ ಕೇಸ್ ಅನ್ನು ಸದ್ಯ ಸಿಬಿಐ ತನಿಖೆ ನಡೆಸುತ್ತಿದ್ದು, ಈ ಕೇಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಬಂದಿರುವುದು ಎರಡೂ ಪಕ್ಷಗಳ ನಡುವೆ ವಾಗ್ಯದ್ಧಕ್ಕೆ ಕಾರಣವಾಗಿದೆ.












Click it and Unblock the Notifications