ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ ಕಾವೇರಿ..: ‘ಕೈ’ VS ‘ಕಮಲ’ ಫೈಟ್!
ಒಂದು ಕಡೆ ಕನ್ನಡಿಗರು ಕಾವೇರಿ ನೀರಿಗೆ ಪರದಾಡುವ ಸಂದರ್ಭದಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಕಿತ್ತಾಟ ಶುರುವಾಗಿದೆ. ಕಾವೇರಿ ವಿಚಾರದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಹಾಗಾದರೆ ರಾಜ್ಯ ಬಿಜೆಪಿ ಇದೀಗ ಕಾಂಗ್ರೆಸ್ ವಿರುದ್ಧ ಕಾವೇರಿ ವಿಚಾರದಲ್ಲಿ ಮಾಡಿದ ಆರೋಪ ಏನು?
ಕಾವೇರಿ ಕೊಳ್ಳದಲ್ಲಿ ಈಗ ಭೀಕರ ಬರ ಸ್ಥಿತಿ ಎದುರಾದ ಸಮಯಕ್ಕೇ, ನೀರು ಬಿಡಿ ಅಂತಾ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು ಒತ್ತಡ ಹೇರುತ್ತಿದೆ. ಈ ಸಮಯದಲ್ಲಿ ಒಗ್ಗಟ್ಟಾಗಿ ಇರಬೇಕಿದ್ದ ಕರ್ನಾಟಕ ರಾಜಕೀಯ ಪಕ್ಷಗಳು ಮಾತ್ರ ಒಗ್ಗಟ್ಟು ಮರೆತು ತಮ್ಮೊಳಗೇ ಫೈಟ್ ಮಾಡುತ್ತಿವೆ. ಒಂದ್ಕಡೆ ಕಾವೇರಿ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲಿ ಅಂತಿದೆ ಕಾಂಗ್ರೆಸ್, ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್ ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಅಂತಿದೆ ಬಿಜೆಪಿ.

ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ...
ಬಿಜೆಪಿ ಇದೀಗ ಇದೇ ವಿಚಾರವಾಗಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದು, 'ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ ಕಾವೇರಿ ನೀರು ಬಿಟ್ಟು, ಭದ್ರೆಯ ನೀರಿಗೆ ಅಂಕುಶ ಹಾಕಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ನಾಡಿಗೆ ಅನ್ನ ನೀಡುವ ಅನ್ನದಾತನ ಬದುಕು ದುಸ್ತರವಾಗುವ ಜೊತೆಗೆ, ಕುಡಿಯುವ ಹನಿ ನೀರಿಗೂ ಸಹ "ಕೈ" ಸರ್ಕಾರದ ತಪ್ಪು ನಿರ್ಧಾರಗಳಿಂದ ತತ್ವಾರ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ರೈತರು ಬೀದಿಗಿಳಿದು, ಬಂದ್ ಮಾಡಿ ಪ್ರತಿಭಟಿಸಿದರೂ, ಭಂಡ ಸರ್ಕಾರ ಮಾತ್ರ ನಿದ್ದೆಯಿಂದ ಮೇಲೇಳುತ್ತಿಲ್ಲ.' ಎಂದು ಆರೋಪ ಮಾಡಿದೆ.
ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ ಕಾವೇರಿ ನೀರು ಬಿಟ್ಟು, ಭದ್ರೆಯ ನೀರಿಗೆ ಅಂಕುಶ ಹಾಕಿ, @INCKarnataka ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ.
— BJP Karnataka (@BJP4Karnataka) September 26, 2023
ನಾಡಿಗೆ ಅನ್ನ ನೀಡುವ ಅನ್ನದಾತನ ಬದುಕು ದುಸ್ತರವಾಗುವ ಜೊತೆಗೆ, ಕುಡಿಯುವ ಹನಿ ನೀರಿಗೂ ಸಹ "ಕೈ" ಸರ್ಕಾರದ ತಪ್ಪು ನಿರ್ಧಾರಗಳಿಂದ ತತ್ವಾರ ಆರಂಭವಾಗಿದೆ.
ರಾಜ್ಯದೆಲ್ಲೆಡೆ ಕಾಂಗ್ರೆಸ್… pic.twitter.com/VDXsqHhEIR
ಕಾಂಗ್ರೆಸ್ ನಾಡ ದ್ರೋಹಿ ಎಂದ ಬಿಜೆಪಿ!
ಬೆಳಗ್ಗೆ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದ ಬಿಜೆಪಿ, 'ಸುಪ್ರೀಂ ಕೋರ್ಟ್ ತೀರ್ಪು ಬರುವುದಕ್ಕೂ ಮುನ್ನವೇ I.N.D.I ಮೈತ್ರಿಕೂಟ ಮೆಚ್ಚಿಸಲು ರಾತ್ರೋ ರಾತ್ರಿ ತಂಡಿ ಬಿಟ್ಟು ಕಾವೇರಿ ನೀರು ಹರಿಸಿದ್ದೇಕೆಂದು ರೈತ ವಿರೋಧಿ, ನಾಡ ದ್ರೋಹಿ @INCKarnataka, @DKShivakumar ಮತ್ತು @siddaramaiah ಅವರನ್ನೇಕೆ ಪ್ರಶ್ನಿಸುತ್ತಿಲ್ಲ..?' ಎಂದು ಕಾಂಗ್ರೆಸ್ ಮಾಡಿದ್ದ ಟ್ವೀಟ್‌ಗೆ ಸವಾಲು ಎಸೆದಿತ್ತು. ಹೀಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ ಕರ್ನಾಟಕ ಘಟಕ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.

ಒಟ್ನಲ್ಲಿ ಒಂದು ಕಡೆ ಕಾವೇರಿ ವಿಚಾರದಲ್ಲಿ ಕನ್ನಡಿಗರು ಹೋರಾಟ ನಡೆಸುವ ಸಮಯಕ್ಕೆ ಇದೇ ವಿಚಾರದಲ್ಲಿ ರಾಜಕೀಯ ಕೂಡ ಜೋರಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ ಅತ್ತ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ನಾಡಿನ ರಾಜಕೀಯ ಪಕ್ಷಗಳು ಇಲ್ಲೂ ರಾಜಕೀಯ ಮಾಡುತ್ತಿವೆ ಎಂದು ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮತ್ತೆ 18 ದಿನ ನೀರು ಬಿಡಬೇಕಂತೆ!
ಹೀಗೆ ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ಮತ್ತೆ ಶಾಕ್ ಸಿಕ್ಕಿದೆ. ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಆದೇಶ ನೀಡಿದೆ. ಹೀಗೆ ಪ್ರಾಧಿಕಾರದ ಆದೇಶಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬಳಿಕ ಹೋರಾಟ ರಾಜ್ಯದ ಹಲವೆಡೆ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭದ್ರತೆ ಹೆಚ್ಚಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಪರಿಸ್ಥಿತಿಯು ಇನ್ನಷ್ಟು ಸೂಕ್ಷ್ಮವಾಗಿದೆ. ಈಗಾಗಲೇ ಬಂದ್‌ಗೆ ಕರೆ ನೀಡಿರುವ ಸಮಯದಲ್ಲೇ ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಕಾವೇರಿ ಕೊಳ್ಳದಲ್ಲಿ ರೈತರು ಈ ಆದೇಶದ ನಂತರ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications