ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್? ಬಿಜೆಪಿ ಗಂಭೀರ ಆರೋಪ
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಳಸಿಕೊಂಡಿತ್ತು ಎಂದು ಬಿಜೆಪಿ ಆರೋಪ ಮಾಡಿದೆ. ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ಹಮ್ಮಿಕೊಂಡು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಕೇವಲ ಜಾಹೀರಾತುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಮಾತ್ರ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಅಕ್ಷರಶಃ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದೆ.
ಅಂದು ಕೃಷ್ಣೆಯ ಕಡೆಗೆ-ನಮ್ಮ ನಡಿಗೆ ಹೋರಾಟ ಕೈಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಸಿದ್ದರಾಮಯ್ಯ ಭಾಷಣ ಬಿಗಿದಿದ್ದರು. ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದರು. ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳೇ ಬರೆದಿದ್ದವು ಎಂದು ಉಲ್ಲೇಖಿಸಿದೆ.

ಅದಕ್ಕೆ ಕೂಡಲಸಂಗಮದಲ್ಲಿ ನಿಂತು ಭಾಷಣ ಮಾಡಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ನಮಗೆ ಅನುದಾನ ನೀಡಲು ಸಾಧ್ಯವಿದೆ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ನವರು ಕೃಷ್ಣೆಯನ್ನೇ ಮರೆತರು ಎಂದು ಆರೋಪ ಮಾಡಿದೆ.
ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತೇವೆ. ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಕೂಡಲಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಿದ್ದರು. ಅಲ್ಲದೆ ಕಾಯಿಕಟ್ಟಿ ಕಾಂಗ್ರೆಸ್ ನಾಯಕರು ಪ್ರಮಾಣ ಕೂಡ ಮಾಡಿದ್ದರು. ಇಳಕಲ್ ನಗರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡಾ ಕೃಷ್ಣೆಗಾಗಿ 50 ಸಾವಿರ ಕೋಟಿ ವ್ಯಯ ಮಾಡುವ ಬದ್ಧತೆ ಪ್ರಕಟಿಸಿದ್ದರು, ಆದರೆ ಅಧಿಕಾರ ಸಿಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದಾರೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು, ಕೃಷ್ಣಾ ಯೋಜನೆಯೊಂದಕ್ಕೆ ಹೇಳಿದ್ದಲ್ಲ ಎಂದು ತಮ್ಮ ಹೇಳಿಕೆಯನ್ನೇ ಸಿದ್ದರಾಮಯ್ಯ ತಿರುಚಿದ್ದರು. ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್‌ನವರ ಟ್ಯಾಗ್ ಲೈನ್ ಅಷ್ಟೇ, ಅದರಲ್ಲಿ ನಿಜಾಂಶ ಇಲ್ಲವೇ ಇಲ್ಲ. ಗ್ಯಾರಂಟಿ ಯೋಜನೆಗಳಲ್ಲೂ ಷರತ್ತುಗಳನ್ನು ಹಾಕಿ ಯೋಜನೆಗಳನ್ನು ಸೀಮಿತಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳುಗಳ ಪರದೆ ಕುಸಿಯುತ್ತಲೇ ಇದೆ, ಮುಂದೊಂದು ದಿನ ಕಾಂಗ್ರೆಸ್ ಇಂತಹ ಸುಳ್ಳುಗಳಿಂದಲೇ ಸಂಪೂರ್ಣ ನಾಶವಾಗಲಿದೆ ಎಂದು ಶಾಪ ಹಾಕಿದೆ.

ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರು ಇಂದು ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಯಲ್ಲಿ ಪಾಲ್ಗೊಂಡು, ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆ ವಿಳಂಬ, ಮಹದಾಯಿ ಸೇರಿದಂತೆ ಕೃಷ್ಣ ಕಣಿವೆ ಭಾಗದ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications