ಕನ್ನಡದ ಸಿರಿವಂತಿಕೆಗೆ ಹೊಸ ಸೇರ್ಪಡೆ "ಬಂಬಯಿಯಾ ಕನ್ನಡ": ರಾಜಾರಾಂ ತಲ್ಲೂರು ಬರಹ

ಕನ್ನಡದ ಸಿರಿವಂತಿಕೆಗೆ ಹೊಸ ಸೇರ್ಪಡೆ "ಬಂಬಯಿಯಾ ಕನ್ನಡ" - ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಈ "ಬಿಗ್ ಬಾಸ್" ರಿಯಾಲಿಟಿ ಶೋ ಮುಗಿದ ಬಳಿಕ ಹೊರಬಂದಿರುವ ರನ್ನರ್ ಅಪ್, ನಮ್ಮೂರು ಸಮೀಪದ ರಕ್ಷಿತಾ ಶೆಟ್ಟಿ ಅವರ ಕನ್ನಡ ಈಗ ಏಕಾಏಕಿ "ಪಾನ್ ಕರ್ನಾಟಕ" ಪ್ರಸಿದ್ಧಿ ಪಡೆದಿದೆ. ಕರಾವಳಿಯ ಈ ಭಾಗದವರಿಗೆ ಇದೇನೂ ಹೊಸ ಕನ್ನಡ ಅಲ್ಲ.

ತುಳು ಮನೆಮಾತಾಗಿರುವ, ಕನ್ನಡ ವ್ಯಾವಹಾರಿಕ ಭಾಷೆ ಆಗಿರುವ ಕುಟುಂಬಗಳು ಮುಂಬಯಿಗೆ ಹೋಗಿ ನೆಲೆಸಿ, ಅಲ್ಲಿ ಶ್ರಮದ ದುಡಿಮೆಯ ಜೊತೆಗೆ ತಮ್ಮ ಭಾಷೆಗೆ ಹದವಾದ ಮರಾಠಿ, ಹಿಂದಿ, ಗುಜರಾತಿ, ರಾಜಸ್ಥಾನಿ ಭಾಷೆಗಳನ್ನು ರುಚಿಗೆ ತಕ್ಕಂತೆ (ಅಂದರೆ ಅಗತ್ಯಕ್ಕೆ ತಕ್ಕಂತೆ) ಸೇರಿಸಿಕೊಂಡು, ಜೊತೆಗೆ ಅಲ್ಲಿನ ಇಂಗ್ಲಿಷ್ ಮೀಡಿಯಂ ಶಿಕ್ಷಣದ ಮೇಲೋಗರ ಎರೆದುಕೊಂಡು ಕಟ್ಟಿಕೊಂಡಿರುವ ಕನ್ನಡವೇ "ಬಂಬಯಿಯಾ ಕನ್ನಡ." ಈ ಕನ್ನಡ ಬಳಸಿದ ಹಲವು ರೀಲ್ಸ್‌ಗಳೂ ಈ ಭಾಗದಲ್ಲಿ ವೈರಲ್ ಆದದ್ದಿದೆ.

Bigg Boss 12 Kannada Rakshita Tulu language new addition to Kannada riches Bambaiya Kannada By journalist Rajaram Tallur

ನನ್ನ ಶಾಲಾ ದಿನಗಳಲ್ಲಿ, ಹಿಂದಿ ಎಂದರೆ ಈ ಬಂಬಯಿಯಾ ಹಿಂದಿ ಎಂದೇ ತಿಳಿದಿದ್ದವನು ನಾನು. ಊರಲ್ಲಿ ಹಿಂದಿ ಮಾತಾಡುವವರು (ಮುಂಬಯಿಗೆ ವಲಸೆ ಹೋಗಿರುವವರು) ಮತ್ತು ಹಿಂದಿ ಚಿತ್ರರಂಗಗಳನ್ನು ಗಮನಿಸಿ ಗೊತ್ತಿರುವ ಎಲ್ಲರಿಗೂ ಇದು ಬಹಳ ಸಹಜ. ಅಪುನ್, ಆಯೇಲಾ-ಗಯೇಲಾ ಎಂದೆಲ್ಲ ಬಿಂದಾಸ್ ಹಿಂದಿ ಮಾತನಾಡಿಕೊಂಡಿದ್ದ ನನಗೆ ಪಿ.ಯು. ವೇಳೆಗೆ ಹಿಂದಿ ಉಪನ್ಯಾಸಕಿ ಆಗಿ ಬಂದವರು ಉತ್ತರ ಪ್ರದೇಶ ಮೂಲದ, ಹಿಂದಿ ಮನೆಮಾತಿನವರು.

ಅದ್ಭುತವಾದ ಅವರ ಉರ್ದು ಮಿಶ್ರಿತ - ಹಿಂದೂಸ್ಥಾನಿ; ಅವರ ಬಾಯಿಯಿಂದ ಕೇಳಿದ ಮತ್ತು ಮೂಲಕ್ಕೆ ಹತ್ತಿರದ ಉಚ್ಛಾರಗಳ ಸಹಿತ ಸೂರದಾಸರ ಬೃಜ್‌ಭಾಷಾ, ಕಬೀರರ ಸಾಧುಕ್ಕಡೀ (ಪಂಚಮೇಳ), ಹರಿವಂಶ್ ರಾಯ್ ಬಚ್ಚನ್, ಮಹಾದೇವೀ ವರ್ಮಾ ಅವರ ಕಢೀಬೋಲಿ ಅಲ್ಲದೇ ಅವಧೀ, ಹರ್ಯಾಣವೀ ಎಂದೆಲ್ಲ ಹಿಂದಿಯ ಬಗೆಗಳನ್ನು ಕೇಳಿದ ಬಳಿಕ ನಮ್ಮ ಬಂಬಯಿಯಾ ಹಿಂದಿ ಎಷ್ಟು ಸಜ್ಜಿಗೆ-ಬಜೀಲ್ ಎಂದು ಅರ್ಥ ಆಗತೊಡಗಿತ್ತು. ಹಿಂದಿ-ಉರ್ದು ಸಾಹಿತ್ಯದಲ್ಲಿ ಸಣ್ಣ ಆಸಕ್ತಿ ಹುಟ್ಟಲು ಈ ಘಟನೆ ಕಾರಣ ಆಯ್ತು.

ರಕ್ಷಿತಾ ಶೆಟ್ಟಿ ಅವರ ಈ ಬಂಬಯಿಯಾ ಕನ್ನಡ ಅವರನ್ನು ರಿಯಾಲಿಟಿ ಷೋನಲ್ಲಿ ಗೆಲ್ಲಿಸಿದಂತಿದೆ. ಜೊತೆಗೆ ಮುಂಬಯಿಯಲ್ಲಿ ಶ್ರಮ ಜೀವನ ತಂದುಕೊಡುವ ಅನುಭವಗಳು ಅಪಾರ. ಅವು ಆ ಬಿಗ್‌ಬಾಸ್ ಶೋದಲ್ಲಿ ಆಕೆಗೆ ಉಳಿದ ಸ್ಪರ್ಧಿಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿತು ಅನ್ನಿಸುತ್ತದೆ. ಒಟ್ಟಿನಲ್ಲಿ ಕರ್ನಾಟಕದ ವೈವಿಧ್ಯಮಯ ಕನ್ನಡಂಗಳಿಗೆ "ಬಂಬಯಿಯಾ ಕನ್ನಡ" ಈಗ ಅಧಿಕೃತವಾಗಿ ಸೇರ್ಪಡೆಗೊಂಡಿದೆ.

ಅಂದಹಾಗೆ, ನಾನು ಕಳೆದ 15ವರ್ಷಗಳಿಂದ ಸಾಧ್ಯವಾದಾಗಲೆಲ್ಲ ನೋಡುವ ಏಕೈಕ ರಿಯಾಲಿಟಿ ಷೋ ಎಂದರೆ, "ಇಂಡಿಯನ್ ಐಡಲ್ಸ್." ಶನಿವಾರ -ಭಾನುವಾರ ಅದನ್ನು ನೋಡುವ ಮಧ್ಯದಲ್ಲಿ ಜಾಹೀರಾತುಗಳಿರುವಾಗ ಮತ್ತು ಇಂಟರೆಸ್ಟಿಂಗ್ ಅನ್ನಿಸಿದರೆ, ಕೆಲವೊಮ್ಮೆ ಕನ್ನಡದ ನಟ ಸುದೀಪ್ ಅವರು ನಡೆಸಿಕೊಡುವ ವಾರಾಂತ್ಯದ ಪಂಚಾತಿಕೆ ಕಾರ್ಯಕ್ರಮವನ್ನು ನೋಡುವುದಿದೆ. ಅಲ್ಲಿ ಇಡೀ ದೇಹ ಬಳಸಿ ಕನ್ನಡದಲ್ಲಿ ಮಾತನಾಡುವ ಈ ಹುಡುಗಿಯ ಕಮ್ಯುನಿಕೇಷನ್ ಶ್ರಮ ಕುತೂಹಲಕರ ಅನ್ನಿಸಿತ್ತು.

ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+